ಯಲ್ಲಾಪುರ: ಬೆಂಗಳೂರಿನ ಜೆ.ಪಿ. ನಾರಾಯಣ ಸ್ವಾಮಿ ಪ್ರತಿಷ್ಠಾನವು ಸಮಾಜದ ದುರ್ಬಲರಿಗೆ ಮತ್ತು ಶೋಷಿತರಿಗೆ ಸಾಧ್ಯವಿದ್ದಷ್ಟು ನೆರವು ನೀಡುವ ಉದ್ದೇಶದಿಂದ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಪ್ರತಿಷ್ಟಾನದ ಜಿಲ್ಲಾ ಘಟಕದ ಮುಖ್ಯ ಸಂಚಾಲಕ ಪ್ರೊ.ನಾಗೇಶ ನಾಯ್ಕ ಕಾಗಾಲ್ ಹೇಳಿದರು.
ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಸಂಸ್ಥೆಯಿಂದ ಉತ್ತರಕನ್ನಡ, ಧಾರವಾಡ, ಗದಗ, ಬೆಳಗಾವಿ ಹಾಗೂ ಹಾವೇರಿ ಜಿಲ್ಲೆಗಳ ಸುಮಾರು 125 ವಿದ್ಯಾರ್ಥಿಗಳಿಗೆ 8-10 ಲಕ್ಷ ರೂ.ಗಳ ವಿದ್ಯಾರ್ಥಿ ವೇತನ ಮತ್ತು ನೆರವು ನೀಡಲಾಗಿದೆ. 2018 ರಲ್ಲಿ ಆರಂಭಗೊಂಡ ಸ್ವಯಂಸೇವಾ ಪ್ರತಿಷ್ಟಾನವು ಈಡಿಗ ಜನಾಂಗದ ಸೇವೆ, ಸಂಘಟನೆ ಹಾಗೂ ಸಮಾಜಮುಖಿ ಚಟುವಟಿಕೆಗಳ ಮೂಲಕ 26 ಉಪಪಂಗಡಗಳ ಐಕ್ಯತೆ ಮೂಡಿಸುವ ಕಾರ್ಯಮಾಡುತ್ತಿದೆ ಎಂದರು. ಪ್ರತಿಷ್ಟಾನವು ಆರ್ಥಿಕ ಹಿನ್ನೆಲೆ, ಪಠ್ಯ-ಪಠ್ಯೇತರ ಚಟುವಟಿಕೆಗಳ ಆಸಕ್ತಿಯನ್ನು ಮಾನದಂಡವನ್ನಾಗಿರಿಸಿಕೊಂಡು ಅರ್ಹ ವಿದ್ಯಾರ್ಥಿಗಳನ್ನು ಶಿಷ್ಯ ವೇತನಕ್ಕಾಗಿ ಆಯ್ಕೆ ಮಾಡಲು ನಿರ್ಣಯಿಸಿದೆ ಎಂದರು.
ಯಲ್ಲಾಪುರದ ಅಡಿಕೆ ಭವನದಲ್ಲಿ ಮಾ.4ರಂದು ಪ್ರತಿಷ್ಟಾನದ ಕಾರ್ಯಕ್ರಮದಲ್ಲಿ ಈ ನೆರವನ್ನು ವಿತರಿಸಲಾಗುವುದು. ಸೋಲೂರು ಮಠದ ಪೀಠಾಧಿಪತಿ ವಿಖ್ಯಾತನಂದ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಕ್ಷೇತ್ರದ ಉಸ್ತುವಾರಿ ಮಹಾದೇವ ಈಳಿಗಾರ, ಮುಂಡಗೋಡು ತಾಲೂಕಾಧ್ಯಕ್ಷ ತುಕಾರಾಮ ಗುಡ್ಕರ್, ತಾಲೂಕಾ ಮುಖ್ಯ ಸಂಚಾಲಕ ನವೀನ ನಾಯ್ಕ, ಪ್ರಮುಖರಾದ ನರಸಿಂಹ ನಾಯ್ಕ, ಶಿವಾನಂದ ನಾಯ್ಕ, ಮುತ್ತಣ್ಣ ಸಂಗೂರ ಮಠ, ಜಾನ್ ಬಿಳ್ಕಿಕರ್, ಹಜರ್ ಶೇಖ್, ಬೇನಿತ್ ಸಿದ್ಧಿ, ಮತ್ತಿತರರು ಸುದ್ದಿಗೋಷ್ಟಿಯಲ್ಲಿದ್ದರು.