ದೂದ್ ಸಾಗರ್ ಜಲಪಾತಕ್ಕೆ ಹೋಗುವುದು ಪ್ರತಿಯೊಬ್ಬರ ಕನಸು ಅದರಲ್ಲಿ ನಾನು ಒಬ್ಬ . ಹಿಂದಿನ ವರ್ಷದಿಂದಲೇ ಅಲ್ಲಿಗೆ ಹೋಗಬೇಕೆಂದು ಕೊಂಡಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ. ಆದರೆ ಈ ಆಗಸ್ಟ್’ನಲ್ಲಿ ಆ ಕನಸು ನನಸಾಯಿತು. ನಾನು ಅಕ್ಕ,ಅಣ್ಣ,ತಂಗಿ ಸೇರಿ ನಮ್ಮೂರಿಂದ ಹುಬ್ಬಳ್ಳಿಗೆ ಹೋಗಿ ಅಲ್ಲಿಂದ ರೈಲಿನಲ್ಲಿ ರಾತ್ರಿ ಸುಮಾರು ಹನ್ನೊಂದುವರೆಗೆ ಹೊರಟೆವು. ಸರಿಸುಮಾರು ರಾತ್ರಿ ಎರಡುವರೆ ಗಂಟೆಗೆ ದೂದ್ ಸಾಗರ್ ಸ್ಟೇಷನ್ ಬಂದಿತು. ಆದ್ರೆ ಅಲ್ಲಿ ಇಳಿಯಲು ಅನುಮತಿ ಇಲ್ಲ. ಆದರೂ ಪೊಲೀಸರ ಕಣ್ಣು ತಪ್ಪಿಸಿ ಹೋಗುತ್ತಿರುವ ರೈಲಿನಿಂದ ಹಾರಿದೆವು. ಇನ್ನೇನು ಮುಂದೆ ಹೋಗಬೇಕೆನ್ನುವಷ್ಟರಲ್ಲಿ ಪೊಲೀಸ್ ಬಂದು ತಡೆದೇಬಿಟ್ಟ ವಾಪಸ್ ಹೋಗುವಂತೆ ಹೇಳಿದ. ಏಕೆಂದರೆ ಈ ಕಾಲದಲ್ಲಿ ಅಲ್ಲಿ ಹೋಗಲು ಅನುಮತಿ ಇಲ್ಲ. ಮತ್ತು ಬಂದಿರುವ ತಪ್ಪಿಗಾಗಿ ರೈಲುಹಳಿಯ ಮೇಲೆ ಅರ್ಧ ಕಾಲು ಬಗ್ಗಿಸಿ ಲಾಠಿಯಲ್ಲಿ ಹೊಡೆದು ಸುಮಾರು ಎಂಬತ್ತು ಮೀಟರ್ ನಷ್ಟು ದೂರ ಓಡಿಸಿ ಶಿಕ್ಷೆ ನೀಡಿದರು. ನಮಗಿಂತ ಮೊದಲು ಬಂದ ಸುಮಾರು ಎರಡುನೂರು ಜನರನ್ನು ಆಗಲೇ ವಾಪಸ್ಸು ಕಳಿಸಾಗಿತ್ತು.
ಆದರೆ ನಮ್ಮ ಅದೃಷ್ಟಕ್ಕೆ ನಮ್ಮ ಜೊತೆಗೆ ಬಂದಿದ್ದ ಧಾರವಾಡದಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳು ಅವರ ಗೆಳೆಯ ಪೊಲೀಸ್ ಅಧಿಕಾರಿಯ ಗುರುತಿನ ಚೀಟಿ ತಂದಿದ್ದರು. ಅದನ್ನು ತೆಗೆದುಕೊಂಡು ಅಲ್ಲಿನ ಪೊಲೀಸರು ನಮ್ಮನ್ನು ಬಿಟ್ಟರು. ನಾವು ನಾಲ್ಕು ಜನ ಅವರು ಒಂಬತ್ತು ಜನ ಸೇರಿ ಅಲ್ಲಿಂದ ಜಲಪಾತದ ಕಡೆಗೆ ನಡೆದು ಹೊರಟೆವು. ಅಲ್ಲಿ ಹೋಗಿ ತಲುಪುವ ಹೊತ್ತಿಗೆ ಮೂರುವರೆ. ಅಲ್ಲೇ ಪಕ್ಕದಲ್ಲಿ ಒಂದು ಶೆಡ್’ನಲ್ಲಿ ಕೂತೆವು. ಒಂದು ಕಡೆ ಕುಳಿತು ಕೊಳ್ಳಲು ಸರಿಯಾದ ಜಾಗವಿಲ್ಲ, ಇನ್ನೊಂದೆಡೆ ಅರೆಬರೆ ನಿದ್ದೆ ಹಸಿವು. ಹೇಗೊ ಅಲ್ಲೇ ಕುಳಿತು ಕೊಂಡಿದ್ದೆವು. ಬೆಳಕಾಗಿದ್ದೇ ತಡ ಆರು ಗಂಟೆಗೆ ಜಲಪಾತ ನೋಡಿ ಸೌಂದರ್ಯ ಕಣ್ತುಂಬಿಕೊಂಡೆವು. ಅದರ ಆ ಸೌಂದರ್ಯಕ್ಕೆ ರಾತ್ರಿಯಿಂದ ಪಟ್ಟ ಕಷ್ಟವೆಲ್ಲ ಮರತೆಹೋಗಿತ್ತು. ಅಷ್ಟು ಸುಂದರವಾದ ಜಲಪಾತ. ಮೇಲಿಂದ ಯಾರೋ ಹಾಲನ್ನು ಸುರಿಯುತ್ತಿದ್ದಾರೆ ಅನ್ನುವಷ್ಟು ಬೆಳ್ಳನೆಯ ನೀರು ತುಂಬಿ ಹರಿಯುತ್ತಿದೆ. ನಂತರ ಫೋಟೋ ವಿಡಿಯೋ ಎಲ್ಲ ತೆಗೆದು ಹೊರಡುವಷ್ಟರಲ್ಲಿ ಸಮಯ ಕಳೆದದ್ದೇ ಗೊತ್ತಾಗಲಿಲ್ಲ. ಆದರೂ ಅಲ್ಲಿಂದ ಹೋರಡಲು ಮನಸ್ಸಿಲ್ಲ ಆದರೂ ಅನಿವಾರ್ಯ. ರೈಲುಹಳಿಯ ಮೇಲೆ ನಡೆದು ಹೊರಟೆವು ಅಲ್ಲೇ ಮುಂದೆ ಕುಲೇಮ್’ನ ಒಂದು ದೇವಸ್ಥಾನದಲ್ಲಿ ಕುಳಿತು ನಮ್ಮ ಧಾರವಾಡದ ಹುಡುಗರು ತಂದ ಖಡಕ್ ರೊಟ್ಟಿ ತಿಂದೆವು. ನಾನು ತಂದ ತಿಂಡಿಯನ್ನು ತಿನ್ನಲು ಬಿಡದೆ, ಅವರು ತಂದ ರೊಟ್ಟಿಯನ್ನೇ ತಿಂದೆವು. ಧಾರವಾಡ ಪೇಡದಂತೆ ಇತ್ತು ಅವರ ಮನಸ್ಸು. ನಂತರ ಅಲ್ಲಿಂದ ಅಲ್ಲಿಂದ ಹೊರಟು ಮುಂದಿನ ದಾರಿ ಹಿಡಿದೆವು ದಾರಿಯುದ್ದಕ್ಕೂ ಮಾತನಾಡುತ್ತ ಅಲ್ಲಿ ಇಲ್ಲಿ ಸಿಕ್ಕ ಸಣ್ಣ ಪುಟ್ಟ ಹೊಳೆ ಜಲಪಾತಗಳಲ್ಲಿ ಆಟವಾಡುತ್ತ ಮುಂದೆ ನಡೆದು ಕುಲೆಮ್ ರೈಲು ನಿಲ್ದಾಣ ತಲುಪಿದೆವು. ಅಷ್ಟೋತ್ತಿಗಾಗಲೇ ನಾವು ಸುಮಾರು ಹದಿನಾಲ್ಕು ಹದಿನಾರು ಕಿಲೋಮೀಟರ್ ನಷ್ಟು ನಡೆದಿದ್ದೆವು. ಆದರೂ ಆ ದಾರಿ ಮದ್ಯೆ ಬರುವಾಗ ಸಿಗುವ ರೈಲು, ಸುರಂಗ. ಹೊಳೆ. ಆ ಸುಂದರ ಪರಿಸರದ ಅನುಭವ ಆಹಾ ವರ್ಣಿಸಲು ಅಸಾಧ್ಯ. ಮತ್ತೆ ಎಲ್ಲರೊಡಗುಡಿ ರೈಲಿನಲ್ಲಿ ತಮ್ಮ ತಮ್ಮ ಮನೆಯಕಡೆ ಪ್ರಯಾಣ ನಡೆಸಿದೆವು. ಒಟ್ಟಿನಲ್ಲಿ ಜೀವನದಲ್ಲಿ ಮರೆಯಲಾಗದ ಅನುಭವದ ಕ್ಷಣ ಅದು.
ಕಾರ್ತಿಕ ಹೆಗಡೆ
2nd ಜೆ.ಎಂ.ಸಿ.
ಎಸ್.ಡಿ.ಎಂ.ಸಿ. ಉಜಿರೆ