ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳನ್ನು ಸರಕಾರದ ಗಮನ ಸೆಳೆಯುವ ಹಿನ್ನೆಲೆಯಲ್ಲಿ ಶಿರಸಿಯಲ್ಲಿ ಹಮ್ಮಿಕೊಳ್ಳಲಾದ ಅರಣ್ಯವಾಸಿಗಳ ಬೃಹತ್ ಮಹಾಸಂಗ್ರಾಮದಲ್ಲಿ ಆರು ಸಾವಿರಕ್ಕಿಂತ ಮಿಕ್ಕಿ ಅತಿಕ್ರಮಣದಾರರ ಭಾಗವಹಿಸುವಿಕೆಯಿಂದ ಯಶಸ್ವಿಯಾಗಿ ಜರುಗಿ, ಅರಣ್ಯ ಇಲಾಖೆಗೆ ಐದು ಅಂಶದ ಒಡಂಬಡಿಕೆ ಪತ್ರ ರವಾನಿಸಿದ ಘಟನೆ ಜರುಗಿದವು. ಸಿ.ಸಿ.ಎಫ್ ಆಗಮನಕ್ಕಾಗಿ ಮೂರು ತಾಸು ಮಿಕ್ಕಿ ಪ್ರತಿಭಟನಾಕಾರರು ಡಿ.ಎಫ್.ಓ ಕಚೇರಿಯಲ್ಲಿ ಧರಣಿ ಕಾರ್ಯಕ್ರಮ ಜರುಗಿಸಿದರು.
ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ನೇತೃತ್ವದಲ್ಲಿ ಜರುಗಿದ ಅರಣ್ಯವಾಸಿಗಳ ಮಹಾ ಸಂಗ್ರಾಮವು ಬಿಡ್ಕಿಬೈಲಿನ ಗಾಂಧಿ ಪ್ರತಿಮೆ ಎದುರಿನಿಂದ ಪ್ರಾರಂಭಗೊಂಡು, ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯವರೆಗೆ ಜಿಲ್ಲಾದ್ಯಂತ ಆಗಮಿಸಿದ ಬೃಹತ್ ಸಂಖ್ಯೆಯ ಅರಣ್ಯವಾಸಿಗಳು ಭಾಗವಹಿಸಿದ್ದು ವಿಶೇಷವಾಗಿತ್ತು.
ಕಾರ್ಯಕ್ರಮದಲ್ಲಿ ಇಬ್ರಾಹಿಂ ಗೌಡಳ್ಳಿ, ಎಮ್.ಆರ್. ನಾಯ್ಕ ಕಂಡ್ರಾಜಿ, ದೇವರಾಜ ಮರಾಠಿ, ರಾಮ ಮರಾಠಿ, ಲಕ್ಷ್ಮಣ ಮಾಳ್ಳಕ್ಕನವರ, ವಿನೋದ ಯಲಕೊಟಗಿ, ಭಿಮ್ಸಿ ವಾಲ್ಮೀಕಿ, ಮಂಜುನಾಥ ಮರಾಠಿ, ಮಾಭ್ಲೇಶ್ವರ ನಾಯ್ಕ ಬೇಡ್ಕಣಿ, ನಾಗರಾಜ ಮರಾಠಿ ಕೋಡಿಗದ್ದೆ, ದಿನೇಶ್ ನಾಯ್ಕ, ನೇಹರೂ ನಾಯ್ಕ ಬಿಳೂರು, ಸುನೀಲ್ ನಾಯ್ಕ ಸಂಪಖಂಡ, ವಿನಾಯಕ ಮರಾಠಿ, ದಿಲೀಪ್ ಜೊಯಿಡಾ, ಸಾರಂಬಿ ಬೇಟ್ಕುಳಿ, ಯಾಕೂಬ ಸಾಬ್, ಪಾಂಡುರಂಗ ನಾಯ್ಕ ಬೆಳಕೆ, ತಂಜೀಮ್ ಅಧ್ಯಕ್ಷರು ಇನಾಯತ್ ಸಾಬಂದ್ರಿ, ಗಣೇಶ ರಾಮಾಪುರ ಮುಂತಾದ ಪ್ರಮುಖರು ಭಾಗವಹಿಸಿದ್ದರು.
ಐದು ಅಂಶದ ಒಡಂಬಡಿಕೆ ಪತ್ರ:
ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಗಳ ಅದಿಭೋಗ ಮತ್ತು ಸಾಗುವಳಿ ಕ್ಷೇತ್ರಕ್ಕೆ ಒಕ್ಕಲೆಬ್ಬಿಸಬಾರದು ಮತ್ತು ಆತಂಕ ಪಡಿಸಬಾರದು, ಒಕ್ಕಲೆಬ್ಬಿಸುವ ಪೂರ್ವ ಕರ್ನಾಟಕ ಅರಣ್ಯ ಕಾಯಿದೆ ಕಲಂ 64ಎ ಪ್ರಕ್ರಿಯೆ ಜರುಗಿಸುವುದು, ಅರಣ್ಯವಾಸಿಯ ಸಾಗುವಳಿಗೆ ಮತ್ತು ಮೂಲಭೂತ ಸೌಕರ್ಯಕ್ಕೆ ಆತಂಕಪಡಿಬಾರದು, ಅರಣ್ಯವಾಸಿಗಳ ಮೇಲೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ನೀಡಬಾರದು, ಅರಣ್ಯ ಹಕ್ಕು ಕಾಯಿದೆಯಲ್ಲಿ ಅರ್ಜಿ ಸಲ್ಲಿಸಿದವರ ಮೇಲೆ ಜರಗುತ್ತಿರುವ ಒಕ್ಕಲೆಬ್ಬಿಸುವ ಪ್ರಕ್ರಿಯೆ ತಕ್ಷಣ ಸ್ಥಗಿತಗೊಳಿಸುವುದು ಎಂಬ ಐದು ಅಂಶದ ಒಡಂಬಡಿಕೆ ಪತ್ರ ಅರಣ್ಯ ಇಲಾಖೆಗೆ ರವಾನಿಸಲಾಯಿತು.
ಲಿಖಿತ ಉತ್ತರ ನೀಡಲು ಹೋರಾಟಗಾರರು ಪಟ್ಟು ಹಿಡಿದಾಗಲೂ, ಡಿ.ಎಫ್.ಓ ಅಜ್ಜಯ್ಯ ಕಾಲಾವಕಾಶ ಕೋರಿದಾಗ ಪ್ರತಿಭಟನಾಕಾರರು ಧರಣಿ ಅಂತ್ಯಗೊಳಿಸಿ ಮುಖ್ಯಮಂತ್ರಿ ಭೇಟ್ಟಿಗೆ ಬನವಾಸಿ ಪಾದಯಾತ್ರೆ ಪ್ರಾರಂಭಿಸಿದರು.
ಮುಖ್ಯಮಂತ್ರಿ ಭೇಟ್ಟಿಗಾಗಿ ಬನವಾಸಿಗೆ ಪಾದಯಾತ್ರೆ-ಪೋಲೀಸರಿಂದ ನಿರ್ಬಂಧ
ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ಗಮನ ಹರಿಸುವ ಉದ್ದೇಶದಿಂದ ಶಿರಸಿಯಿಂದ ಬನವಾಸಿವರೆಗೆ ಹಮ್ಮಿಕೊಳ್ಳಲಾದ ಪಾದಯಾತ್ರೆಗೆ ಪೋಲೀಸರು ಮಾರಿಕಾಂಬಾ ದೇವಾಲಯದ ಎದುರು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಪಾದಯಾತ್ರೆ ಮೊಟಕುಗೊಳಿಸುವ ಸಂದರ್ಭ ಜರುಗಿತು.
ಮುಖ್ಯಮಂತ್ರಿ ಬೇಟ್ಟಿಗೆ ಬನವಾಸಿ ಹೊಗುವ ಕುರಿತು ಪೋಲೀಸರು ನಿರ್ಬಂಧಿಸಿದ ಸಂದರ್ಭದಲ್ಲಿ ಪ್ರತಿಭಟನಕಾರರೊಂದಿಗೆ ತೀವ್ರ ಮಾತಿನ ಚಕಮಕಿ ಜರುಗಿ ನಿಯೋಗದಿಂದ ಮುಖ್ಯಮಂತ್ರಿ ಭೇಟ್ಟಿಗೆ ಕೊಟ್ಟಿರುವ ಅವಕಾಶವನ್ನು ಹೋರಾಟಗಾರರು ತಿರಸ್ಕರಿಸಿ ಪಾದಯತ್ರೆ ಮೊಟಕುಗೊಳಿಸಿದರು.