• Slide
    Slide
    Slide
    previous arrow
    next arrow
  • ಗೋಕರ್ಣದಲ್ಲಿ ‘ಭಾವರಾಮಾಯಣ’ ಲೋಕಾರ್ಪಣೆ

    300x250 AD

    ಕುಮಟಾ: ಗೋಕರ್ಣದ ವಿಷ್ಣುಗುಪ್ತ ವಿಶ್ವವಿದ್ಯಾಪೀಠದಲ್ಲಿ ಧರ್ಮಭಾರತೀ, ಶ್ರೀಸಂಸ್ಥಾ ಪತ್ರಿಕೆಗಳಲ್ಲಿ ಶ್ರೀರಾಘವೇಶ್ವರ ಸ್ವಾಮೀಜಿಯವರು ಬರೆದ ‘ಭಾವರಾಮಾಯಣ’ ಲೋಕಾರ್ಪಣಾ ಕಾರ್ಯಕ್ರಮ ನಡೆಯಿತು.

    ಲೋಕಾರ್ಪಣೆಗೊಳಿಸಿ ಆಶೀರ್ವಚನ ನೀಡಿದ ಶ್ರೀಗಳು, ಎಲ್ಲ ಜೀವಿಗಳೂ ಬಯಸುವುದು ಸುಖವನ್ನು. ಆದರೆ ಸುಖವನ್ನು ಪಡೆಯುವುದು ಮಾತ್ರ ನಮ್ಮ ಕೈಯಲ್ಲಿದೆ. ಬಯಸಿದುದನ್ನು ಪಡೆಯುವುದು ನಮ್ಮ ಕೈಮೀರಿದೆ. ರಾಮಾಯಣವು ಇರುವ ಸುಖವನ್ನಲ್ಲದೆ, ಇಲ್ಲದ, ಕೈಮೀರಿದ ಸುಖವನ್ನೂ ಕೊಡಿಸುತ್ತದೆ ರಾಮಾಯಣವನ್ನು ಓದುವಾಗಲೇ ಶಬ್ದಗಳಲ್ಲಿ ಹೇಳಲಾರದ ಸುಖದ ಅನುಭವವಾಗುತ್ತದೆ. ರಾಮಾಯಣವು ತೋರಿದ ಹಾದಿಯಲ್ಲಿ ನಡೆದಾಗ ಜೀವನದಲ್ಲಿ ಅನ್ಯಾನ್ಯ ಸುಖಗಳು ಒದಗಿ ಬರುತ್ತವೆ. ರಾಮಾಯಣದ ಅವಲೋಕನವು ಪುಣ್ಯವನ್ನು ತಂದುಕೊಡುತ್ತದೆ. ಹೀಗೆ ರಾಮಾಯಣದ ಅನುಸಂಧಾನದಿಂದ ಮುಬ್ಬಗೆಯ ಸುಖಗಳ ಪ್ರಾಪ್ತಿಯಾಗುತ್ತದೆ.ರಾಮಾಯಣದ ಓದಿನಿಂದ ಜೀವಿಯು ಬಯಸುವ ಧರ್ಮ, ಅರ್ಥ, ಕಾಮ, ಮೋಕ್ಷಗಳೆಂಬ ಪುರುಷಾರ್ಥಗಳು ಲಭಿಸುತ್ತವೆ. ನಾಲ್ಕು ಪುರುಷಾರ್ಥಗಳನ್ನು ಹೊರತುಪಡಿಸಿ ಜೀವಿ ಏನನ್ನೂ ಬಯಸುವುದಿಲ್ಲ. ಏನನ್ನೇ ಬಯಸಿದರೂ ಅದು ಪುರುಷಾರ್ಥಗಳಲ್ಲೇ ಬರುತ್ತದೆ. ಹಾಗಾಗಿ ಪುರುಷಾರ್ಥವನ್ನು ಕೊಡುವುದರ ಮೂಲಕ ರಾಮಾಯಣ ಎಲ್ಲವನ್ನೂ ಕೊಟ್ಟಂತಾಯಿತು ಎಂದು ಹೇಳಿದರು.

    ಇಂದು ಜಗತ್ತು ಹಣದ ಹಿಂದೆ ಓಡುತ್ತಿದೆ. ರಾಮಾಯಣವನ್ನು ಪಠಿಸಿದರೆ ಸಂಪತ್ತೇ ನಮ್ಮೆಡೆಗೆ ಹರಿದು ಬರುತ್ತದೆ. ರಾಮಾಯಣ ನಮ್ಮನ್ನು ಮತ್ತು ರಾಮಾವತಾರಿ ವಿಷ್ಣುವನ್ನು ಹತ್ತಿರವಾಗಿಸುತ್ತದೆ. ವಿಷ್ಣುವಿನ ಜೊತೆ ಲಕ್ಷ್ಮಿಯೂ ಇರುತ್ತಾಳೆ ಎಂದು ಅಭಿಪ್ರಾಯಪಟ್ಟರು. ಧರ್ಮಭಾರತೀ ಸಂಪಾದಕ ಕೃಷ್ಣಾನಂದ ಶರ್ಮಾ ಪ್ರಸ್ತಾವಿಕವಾಗಿ ಮಾತನಾಡಿ, ಶ್ರೀಗಳು ಸಂನ್ಯಾಸ ಸ್ವೀಕರಿಸಿ ಮೂವತ್ತು ವರ್ಷ ಸಂದಲಿದೆ. ಈ ಹೊತ್ತಿನಲ್ಲಿ ಶ್ರೀಮಠದ ಅಂಗಸಂಸ್ಥೆ ಶ್ರೀಭಾರತೀಪ್ರಕಾಶನ ಪ್ರಕಟಿಸುವ ಧರ್ಮಭಾರತೀ ಪತ್ರಿಕೆಯಲ್ಲಿ ಪ್ರತಿತಿಂಗಳು ಶ್ರೀಗಳೇ ಪೂರ್ಣ ರಾಮಾಯಣವನ್ನು ಬರೆಯಲಿದ್ದಾರೆ. ಅದನ್ನು ಮೂವತ್ತು ಸಾವಿರಕ್ಕೂ ಹೆಚ್ಚು ಮನೆಗಳಿಗೆ ತಲುಪಿಸಲಾಗುತ್ತಿದೆ. ಈ ರಾಮಾಯಣ ಲೇಖನ ಪೂರ್ಣಗೊಂಡಾಗ ಪೂರ್ಣರಾಮಾಯಣ ಅಷ್ಟು ಮನೆಗಳಲ್ಲಿ ಶಾಶ್ವತವಾಗಿ ಇರಲಿದೆ. ರಾಮಚಂದ್ರಾಪುರಮಠ ಮಾಡಿದ ಅನೇಕ ಶಾಶ್ವತ ಕಾರ್ಯಗಳಲ್ಲಿ ಇದೂ ಒಂದಾಗಲಿದೆ. ಧರ್ಮಭಾರತಿಯ ಜೊತೆ ಶ್ರೀಸಂಸ್ಥಾ ಎನ್ನುವ ಶ್ರೀಮಠದ ವಾರ್ತಾ ಪತ್ರಿಕೆಯನ್ನು ಕೂಡ ಪ್ರತಿ ತಿಂಗಳು ಪ್ರಕಟಿಸಲಾಗುತ್ತದೆ. ಇದು ಪ್ರತಿದಿನ ನಡೆಯುತ್ತಿರುವ ಶ್ರೀಮಠದ ಲೋಕಕಲ್ಯಾಣಕಾರ್ಯಗಳ ಸಮಗ್ರ ಮಾಹಿತಿಯನ್ನು ಎಲ್ಲರಿಗೂ ಲಭ್ಯವಾಗಿಸಲಿದೆ ಎಂದರು.

    300x250 AD

    ರಾಘವೇಶ್ವರಭಾರತೀಶ್ರೀಗಳು ಧರ್ಮಭಾರತೀ ಪತ್ರಿಕೆಯನ್ನು ರಾಮಾರ್ಪಣಗೊಳಿಸಿದರು. ನಂತರ ಪತ್ರಿಕೆಯನ್ನು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ವಿದ್ಯಾರ್ಥಿಗಳಿಗೆ ಮತ್ತು ಶಿಷ್ಯಭಕ್ತರಿಗೆ ಅನುಗ್ರಹಿಸಿ, ರಾಮಾಯಣವನ್ನು ಆಧರಿಸಿ ಪಾಠವನ್ನು ಮಾಡಿದರು. ವಿಶ್ವವಿದ್ಯಾಪೀಠದ ಲೋಕಸಂಪರ್ಕಾಧಿಕಾರಿ ಅಶ್ವಿನೀ ಉಡುಚಿ ಭಾವರಾಮಾಯಣದ ಮಹತ್ತ್ವವನ್ನು ವಿವರಿಸಿದರು. ಮಹಾಮಂಡಲದ ಅಧ್ಯಕ್ಷ ಆರ್, ಎಸ್ ಹೆಗಡೆ ಹರಗಿ, ಮಠದ ಪ್ರಶಾಸನಾಧಿಕಾರಿ ಸಂತೋಷ ಹೆಗಡೆ, ಶ್ರೀಭಾರತೀ ಪ್ರಕಾಶನದ ಅಧ್ಯಕ್ಷ ಸಚಿನ್, ಉಪಸಂಪಾದಕ ಗಣೇಶ ಕೃಷ್ಣ ಹೆಗಡೆ, ಪ್ರಸರಣ ಮಾರ್ಗದರ್ಶಕ ಮಹೇಶ ಚಟ್ನಳ್ಳಿ ಮತ್ತಿತರರು ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Leaderboard Ad
    Back to top