ಶಿರಸಿ: ಬನವಾಸಿ- ಮಳಗಿ ರಸ್ತೆಯ ಹೊಸಕೊಪ್ಪ ಕೆರೆ ಏರಿ ತಿರುವಿನಲ್ಲಿ ತುಂಬಾ ಅಪಘಾತಗಳು ಸಂಭವಿಸುತ್ತಿದ್ದು, ಈ ವಾರದಲ್ಲಿ ಮೂರು ಪ್ರತ್ಯೇಕ ಅಪಘಾತಗಳಿಂದ ಸಾಕಷ್ಟು ಜನರಿಗೆ ಗಂಭೀರ ಗಾಯಗಳಾಗಿವೆ. ಮುಂದೆ ಜೀವ ಹಾನಿ ಆಗುವ ಪೂರ್ವದಲ್ಲಿ ಇಲಾಖೆಗಳು ಎಚ್ಚೆತ್ತುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ತಕ್ಷಣ ಸುರಕ್ಷತಾ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿ ಹೊಸಕೊಪ್ಪ ಕೆರೆ ಏರಿ ಮೇಲೆ ಕೆಲಕಾಲ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರಾಘವೇಂದ್ರ ನಾಯ್ಕ ಕಿರುವತ್ತಿ ಮಾತನಾಡಿ, ಜನರ ಜೀವ ಅಮೂಲ್ಯ. ಜನರ ಜೀವದೊಂದಿಗೆ ಚೆಲ್ಲಾಟವಾಡಬೇಡಿ. ತಕ್ಷಣ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಆಗ್ರಹಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ಸತೀಶ್ ನಾಯಕ್, ವ್ಯವಸಾಯ ಸೇವಾ ಸಹಕಾರಿ ಸಂಘದ ಸದಸ್ಯ ಗೌರಮ್ಮ ಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಪ್ರಮೋದ್ ಜಕ್ಲಣ್ಣನವರ್, ನವೀನ್ ಜಡೆದರ್, ಹೊಸಕೊಪ್ಪ ಗ್ರಾಮದ ಪ್ರಮುಖರಾದ ದೇವರಾಜ್ ಗೌಡ, ರವಿ ಜಾಡರ್, ಪುಟ್ಟಸ್ವಾಮಿ ಅಂಡಗಿ, ದಾನಪ್ಪ ಅಂಡಗಿ, ಸುರೇಂದ್ರ ಕಿರವತ್ತಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.
ಸ್ಥಳಕ್ಕೆ ಆಗಮಿಸಿದ್ದ ಪಿಡಬ್ಲ್ಯುಡಿ ಎಂಜಿನಿಯರ್‌ಗಳಾದ ಶಿವಾನಂದ್ ಜಾಡರ್, ಭಾನುಪ್ರಕಾಶ್, ಉಪತಹಶೀಲ್ದಾರ್ ನಾಗರಾಜ್ ಬೋರ್ಕರ್ ಮನವಿ ಸ್ವೀಕರಿಸಿದರು. ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಬನವಾಸಿ ಪೊಲೀಸ್ ಠಾಣೆ ಸಿಬ್ಬಂದಿ ರಸ್ತೆ ಸಂಚಾರವನ್ನು ಸುಗಮಗೊಳಿಸಿಕೊಟ್ಟರು.