ಯಲ್ಲಾಪುರ: ತಾಲೂಕಿನ ಹಿತ್ಲಳ್ಳಿಯ ಸೇವಾ ಸಹಕಾರಿ ಸಂಘದ ಸಭಾಭವನದಲ್ಲಿ ಜಿಲ್ಲಾಡಳಿತ ಮತ್ತು ತಾಲೂಕಾಡಳಿತಗಳ ಸಂಯುಕ್ತ ಆಶ್ರಯದಲ್ಲಿ `ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮ ನಡೆಯಿತು.
ತಹಶೀಲ್ದಾರ ಶಂಕರಪ್ಪ ಜಿ.ಎಸ್. ಮಾತನಾಡಿ, ಪಟ್ಟಣ ಮತ್ತು ನಗರಗಳಿಗೆ ತಮ್ಮ ವಿವಿಧ ಸಮಸ್ಯೆಗಳನ್ನು ಅಧಿಕಾರಿಗಳ ಬಳಿ ನಿವೇದಿಸಿಕೊಳ್ಳಲು ತಾಲೂಕಾ ಮಟ್ಟದ ಕಚೇರಿಗಳಿಗೆ ಅಥವಾ ತಹಶೀಲ್ದಾರರ ಕಚೇರಿಗೆ ಪದೇ ಪದೇ ತೆರಳುವ ಕಷ್ಟಗಳಿಗೆ ಕೊನೆ ಮಾಡಲು ಸರ್ಕಾರ ಈ ಕಾರ್ಯಕ್ರಮ ಆಯೋಜಿಸಿದೆ ಎಂದರು.
ಸಾರ್ವಜನಿಕರ ಸಮಸ್ಯೆಗಳನ್ನು ಸಾಧ್ಯವಿರುವ ಪ್ರಮಾಣದಲ್ಲಿ ಸ್ಥಳದಲ್ಲಿಯೇ ಇತ್ಯರ್ಥಗೊಳಿಸುವ ಪ್ರಯತ್ನ ಮಾಡಲಾಗುವುದು. ಉಳಿದ ಅಹವಾಲು ನೀಡಿದ ಸಮಸ್ಯೆಗಳನ್ನು ಪರಿಶೀಲಿಸಿ ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು.
ಸಭೆಯಲ್ಲಿ ಆರಂಭಗೊಂಡ ಸಮಸ್ಯೆಗಳ ಕುರಿತಾದ ಚರ್ಚೆಯ ಆರಂಭದಲ್ಲಿ ಗ್ರಾಮಕ್ಕೆ ರುದ್ರಭೂಮಿಯೊಂದು ಮಂಜೂರಿಯಾಗಿದ್ದು, ಇದು ಊರಿನ ನಡುವೆಯೇ ನಿರ್ಮಾಣಗೊಳ್ಳುವಂತಾಗಿದೆ. ಇದನ್ನು ಬೇರೆ ಅನುಕೂಲಕರ ಪ್ರದೇಶದಲ್ಲಿ ನಿರ್ಮಾಣಗೊಳ್ಳುವಂತೆ ಕ್ರಮವಾಗಬೇಕು ಎಂದು ಗಜಾನನ ಭಟ್ಟ ಕಾಶಿ ಮತ್ತು ಸೂರ್ಯನಾರಾಯಣ ಹೆಗಡೆ ಆಗ್ರಹಿಸಿದರು. ಕೊಪ್ಪದಗದ್ದೆಯ ನಾಗೇಂದ್ರ ನಾಯ್ಕ, ತಮ್ಮ ಗದ್ದೆಯ ನಡುವೆಯೇ ಹಾದುಹೋಗಿರುವ ವಿದ್ಯುತ್ ಮಾರ್ಗವನ್ನು ಸ್ಥಳಾಂತರಿಸಬೇಕೆಂದು ವಿನಂತಿಸಿದರು.
ಭಾಸ್ಕರ ಹೆಗಡೆ ಜಾಗರಮನೆ, ತಮ್ಮ ಪ್ರದೇಶದಲ್ಲಿ ಅನೇಕ ವರ್ಷಗಳ ಹಿಂದೆ ನಿರ್ಮಿಸಲಾದ ಅನೇಕ ವಿದ್ಯುತ್ ಮಾರ್ಗಗಳಲ್ಲಿ ಅಳವಡಿಸಲಾದ ಇನ್ಸುಲೇಟರ್‌ಗಳು ಹಳೆಯದಾಗಿದ್ದು, ಇದರಿಂದ ವಿದ್ಯುತ್ ಸಂಪರ್ಕಕ್ಕೆ ಅಡಚಣೆ ಆಗುತ್ತಿದೆ ಎಂದು ದೂರಿದರು.