ಕುಮಟಾ: ಹಿರಿಯ ಲೆಕ್ಕ ಪರಿಶೋಧಕ ದಿ.ಜಿ.ಎಸ್.ಕಾಮತ್ ಅವರ ಸ್ಮರಣಾರ್ಥ ಜಿಎಸ್‌ಬಿ ಯುವ ಸೇವಾ ವಾಹಿನಿಯು ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಶಾಲಾ ಮೈದಾನದಲ್ಲಿ ಹಮ್ಮಿಕೊಂಡ ವಿವಿಧ ಸ್ಪರ್ಧೆಗಳು ಗಮನ ಸೆಳೆಯಿತು.
ಪಟ್ಟಣದ ಕೊಂಕಣ ಎಜುಕೇಶನ್ ಟ್ರಸ್ಟ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡ ಕ್ರಿಕೆಟ್ ಪಂದ್ಯಾವಳಿ, ಚಿತ್ರಕಲಾ ಸ್ಪರ್ಧೆ, ಧಾನ್ಯ ದಿಂದ ಅಲಂಕೃತ ಆರತಿ ಹರಿವಾಣ ತಯಾರಿಕೆ ಸ್ಪರ್ಧೆ, ಮಹಿಳೆಯರಿಗೆ ಅಡುಗೆ ತಯಾರಿಕೆ ಸ್ಪರ್ಧೆ, ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ಬಲೂ ಉತ್ಸಾಹದಿಂದ ಪಾಲ್ಗೊಂಡ ಜಿಎಸ್‌ಬಿ ಸಮಾಜ ಬಾಂಧವರು ಉತ್ತಮ ಪ್ರದರ್ಶನ ನೀಡಿದರು. ಕ್ರಿಕೆಟ್ ಪಂದ್ಯಾವಳಿಯಲ್ಲಿ ಮುಖ್ಯಪ್ರಾಣ ವೀರ ವಿಠಲ ಗೋಕರ್ಣ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಕುಮಟಾ ಏಕಾದಶ ಸಾರಸ್ವತ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿತು. ಹಗ್ಗ ಜಗ್ಗಾಟದಲ್ಲಿ ಪುರುಷ ವಿಭಾಗದಲ್ಲಿ ಭಜರಂಗಿ ಬಾಯ್ಸ್ ಪ್ರಥಮ ಹಾಗೂ ಕುಮಟಾ ಏಕಾದಶ ಸಾರಸ್ವತ ತಂಡ ದ್ವಿತೀಯ, ಮಹಿಳೆಯರ ವಿಭಾಗದಲ್ಲಿ ಐಶ್ವರ್ಯ ಬಾಳಗಿ ತಂಡ ಚಾಂಪಿಯನ್, ಶಾಂತೇರಿ ಮಹಿಳಾ ಮಂಡಲ ಸೀಮಾ ಕಿಣಿಯವರ ತಂಡ ರನ್ನರ್ ಅಪ್ ಆಗಿ ಹೊರಹೊಮ್ಮಿತು.
ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಯುವ ಸೇವಾ ವಾಹಿನಿ ಅಧ್ಯಕ್ಷ ಪ್ರಸಾದ್ ನಾಯಕ ಹಾಗೂ ವರಮಹಾಲಕ್ಷ್ಮಿ ಮಹಿಳಾ ಸಂಘದ ಅಧ್ಯಕ್ಷೆ ಮಾಲತಿ ಶಾನಭಾಗ ಮಾತನಾಡಿ, ಗೌಡ ಸರಸ್ವತ ಬ್ರಾಹ್ಮಣ ಸಮಾಜ ಈ ರೀತಿಯ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಸಂತೋಷದ ವಿಚಾರ. ಸಮಾಜದ ಸಂಘಟನೆ ಸಮಾಜದ ಅಭಿವೃದ್ಧಿಗೆ ಅತ್ಯಂತ ಪೂರಕವಾಗಿದೆ ಎಂದರು. ಶ್ರೀ ವೆಂಕಟರಮಣ ದೇವಸ್ಥಾನದ ಮುಕ್ತೇಶ್ವರರಾದ ಶ್ರೀ ಲಕ್ಷ್ಮಿದಾಸ್ ನಾಯಕ ರವರು ಸಂಘಟರನ್ನು ಹುರಿದುಂಬಿಸಿದರು. ಈ ಸಂದರ್ಭದಲ್ಲಿ ಕುಮಟಾದಿಂದ ಶ್ರೀ ಪರ್ತಗಾಳಿ ಮಠಕ್ಕೆ ಪಾದಯಾತ್ರೆಯಲ್ಲಿ ಭಾಗವಹಿಸಿದ ಪಾದಯಾತ್ರಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಮಾಜದ ಪ್ರಮುಖರಾದ ಅನಂತ ಶಾನಭಾಗ, ಅಶೋಕ ಶಾನಭಾಗ , ಅಜಿತ್ ಶಾನಭಾಗ, ಮುಕುಂದ ಶಾನಭಾಗ ಕಲ್ಬಾಗಕರ, ವಿಜಯಾನಂದ ಗೋಳಿ, ರಾಜು ಶಾನಭಾಗ್ ಕಾಲ್ಬಾಗಕರ್, ಧೀರು ಶಾನಭಾಗ, ಮುಕುಂದ ಶಾನಭಾಗ ವಲ್ಲಿಗದ್ದೆ, ಲಕ್ಷ್ಮೀನಾರಾಯಣ ಹೆಗಡೇಕರ, ಶ್ರದ್ಧಾ ಭಟ್, ಮಾಲತಿ ಶಾನಭಾಗ, ರಾಜು ಶಾನಭಾಗ, ಮುಕುಂದ ಶಾನಭಾಗ ಇತರರು ಉಪಸ್ಥಿತರಿದ್ದರು. ಸ್ಪರ್ಧಾ ಕಾರ್ಯಕ್ರಮದ ಬಳಿಕ ನಡೆದ ಮೂರು ಮುತ್ತು ಖ್ಯಾತಿಯ ತಂಡದಿಂದ ಪ್ರದರ್ಶನಗೊಂಡ ‘ಹುಡುಗಿ ಓಡಿ ಹೋದಳು’ ಎಂಬ ಹಾಸ್ಯಮಯ ನಾಟಕ ಪ್ರೇಕ್ಷಕರನ್ನು ರಂಜಿಸಿತು.
ದಿ.ಜಿ.ಎಸ್.ಕಾಮತ್ ಸ್ಮರಣಾರ್ಥ ವಿವಿಧ ಸ್ಪರ್ಧೆಗಳು ಯಶಸ್ವಿ
