ಕಾರವಾರ: ಕಡಲನಗರಿ ಕಾರವಾರದಲ್ಲಿ ಹಿಂದವೀ ಸಾಮ್ರಾಜ್ಯ ಸಂಸ್ಥಾಪಕ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯುತ್ಸವ ರಾಜ್ಯ ಮಟ್ಟದ ಕಾರ್ಯಕ್ರಮ ನಡೆಯಿತು. ಟ್ಯಾಗೋರ್ ಕಡಲತೀರದಲ್ಲಿ ಸಭಾ ಕಾರ್ಯಕ್ರಮ ನಡೆದರೆ, ಅದಕ್ಕೂ ಪೂರ್ವ ನಡೆದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು.
ಶಿವಾಜಿ ಜಯಂತಿ ಸಭಾ ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕಾರವಾರದ ಸದಾಶಿವಗಡದ ದುರ್ಗಾದೇವಿ ದೇವಸ್ಥಾನದಲ್ಲಿ ಶಾಸಕಿ ರೂಪಾಲಿ ನಾಯ್ಕ ಪೂಜೆ ನೆರೆವೇರಿಸಿದರು. ನಂತರ ಕಾಳಿ ರಿವರ್ ಗಾರ್ಡನನಿಂದ ಆಯೋಜಿಸಲಾಗಿದ್ದ ಶೋಭಾಯಾತ್ರೆಗೆ ಚಾಲನೆ ನೀಡಿದರು. ಶೋಭಯಾತ್ರೆಯಲ್ಲಿ ವಿವಿಧ ಕಲಾ ತಂಡಗಳು ಭಾಗವಹಿಸಿದ್ದವು. ಈ ಶೋಭಾಯಾತ್ರೆ ಕಾಳಿ ರಿವರ್ ಗಾರ್ಡನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸುತ್ತಿ ಮಯೂರವರ್ಮ ವೇದಿಕೆಯ ಬಳಿ ಕೊನೆಗೊಂಡಿತು. ಮೆರವಣಿಗೆಯಲ್ಲಿ ಡೊಳ್ಳು, ನಗಾರಿ, ಮಹಿಳೆಯರ ಕುಣಿತ, ಡಿಜೆ, ಶಿವಾಜಿಯ ಮೂರ್ತಿ ಆಕರ್ಷಿತವಾಗಿತ್ತು.
ಕಾರ್ಯಕ್ರಮದಲ್ಲಿ ಗೋಸಾಯಿ ಮಹಾಸಂಸ್ಥಾನ ಮಠದ ಮಂಜುನಾಥ ಭಾರತಿ ಸ್ವಾಮೀಜಿ ವಿಶೇಷ ಉಪನ್ಯಾಸ ನೀಡಿದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕಧಿಕಾರಿ ಈಶ್ವರ್ ಖಂಡೂ, ಉಪವಿಭಾಗಧಿಕಾರಿ ಜಯಲಕ್ಷ್ಮಿ ರಾಯಕೋಡ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಬಸವರಾಜ್ ಹೂಗಾರ, ನಗರಸಭೆ ಅಧ್ಯಕ್ಷ ಡಾ.ನಿತೀನ ಪಿಕಳೆ, ನಗರಸಭೆ ಉಪಾಧ್ಯಕ್ಷ ಪ್ರಕಾಶ ನಾಯ್ಕ, ಕರ್ನಾಟಕ ರಾಜ್ಯ ಕ್ಷತ್ರಿಯ ಮರಾಠ ಪರಿಷತ್ ಅಧ್ಯಕ್ಷರ ಸಂಜೀವಕುಮಾರ್ ಬೋಬಾಟೆ, ಜಿಲ್ಲಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಚಂದ್ರ, ಉತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಸಮುದಾಯದವರು ಉಪಸ್ಥಿತರಿದ್ದರು.