ಶಿರಸಿ: ಸಪ್ಟೆಂಬರ್ 2022 ನೇ ಮಾಹೆಯ ಸರ್ಕಾರದಿಂದ ಹಾಲು ಉತ್ಪಾದಕರಿಗೆ ನೀಡಲಾಗುವ ರೂ. 5 ಪ್ರೋತ್ಸಾಹ ಧನವು ಆಧಾರ ಜೋಡಣೆಯಾದ ಹಾಲು ಉತ್ಪಾದಕ ರೈತರ ಬ್ಯಾಂಕ್ ಖಾತೆಗೆ ಫೆ. 21, ಮಂಗಳವಾರದಂದು ಜಮಾ ಆಗಿದೆ ಎಂದು ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿ., ಧಾರವಾಡದ ನೌಕರರ ಕಲ್ಯಾಣ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಕೃಷ್ಣ ಹೆಗಡೆ ಕೆಶಿನ್ಮನೆ ತಿಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು ಜನವರಿ-2023 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ನಮ್ಮಿಂದ ಕ್ಷೀರಸಿರಿ ತಂತ್ರಾಶದಲ್ಲಿ ಈಗಾಗಲೇ ಅಳವಡಿಸಲಾಗಿದ್ದು, ಫೆಬ್ರವರಿ-2023 ನೇ ಮಾಹೆಯ ಪ್ರೋತ್ಸಾಹ ಧನದ ಮಾಹಿತಿಯನ್ನು ಇದೇ ತಿಂಗಳಾಂತ್ಯದಲ್ಲಿ ಜಿಲ್ಲೆಯಾದ್ಯಂತ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಹಾಲು ಸಂಘಗಳಿಂದ ಪಡೆದು ಕ್ಷೀರಸಿರಿ ತಂತ್ರಾಶದಲ್ಲಿ ಅಳವಡಿಸಲಾಗುವುದು. ಅಕ್ಟೋಬರ್, ನವೆಂಬರ್, ಡಿಸೆಂಬರ್ ಹಾಗೂ ಜನವರಿ ತಿಂಗಳುಗಳ ರೂ. 5 ಪ್ರೋತ್ಸಾಹಧನವು ಕೂಡ ಶೀಘ್ರದಲ್ಲೇ ಹಾಲು ಉತ್ಪಾದಕರ ರೈತರ ಬ್ಯಾಂಕ್ ಖಾತೆಗೆ ಸರ್ಕಾರದಿಂದ ಜಮಾ ಆಗಲಿದೆ ಎಂದು ಅವರು ಆಶಯ ವ್ಯಕ್ತಪಡಿಸಿದರು. ರೂ. 5 ಪ್ರೋತ್ಸಾಹ ಧನ ಜಮಾ ಆಗದ ಹಾಲು ಉತ್ಪಾದಕ ರೈತರು ಕೂಡಲೇ ಆಯಾವ್ಯಾಪ್ತಿಯ ವಿಸ್ತರಣಾಧಿಕಾರಿಗಳನ್ನು ಸಂಪರ್ಕಿಸಲು ಸೂಚಿಸಿದರು.