ಯಲ್ಲಾಪುರ: ತಾಲೂಕಿನ ಗ್ರಾಮದೇವಿ ಜಾತ್ರೆಗೆ ಸಿದ್ಧತೆ ಜೋರಾಗಿದೆ. ಫೆ.22ರಿಂದ ಮಾ.2ವರೆಗೆ 9 ದಿನ ಅದ್ಧೂರಿಯಾಗಿ ಜಾತ್ರೆ ನಡೆಯಲಿದೆ. ಪ್ರತಿ ಮೂರು ವರ್ಷಗಳಿಗೆ ಒಮ್ಮೆ ನಡೆಯುವ ಜಾತ್ರೆಗಾಗಿ ವಿವಿಧ ತಯಾರಿಗಳನ್ನು ನಡೆಸಲಾಗಿದೆ.
ಯಲ್ಲಾಪುರ ಪಟ್ಟಣ ಜಾತ್ರೆಗಾಗಿ ಸಿಂಗಾರಗೊಳ್ಳುತ್ತಿದೆ. ದೇವಿ ದೇವಸ್ಥಾನದಿಂದ ಗಾಂಧಿ ಸರ್ಕಲ್ ವರೆಗೆ ಕೇಸರಿಯ ಪತಾಕೆಗಳಿಂದ ಪಟ್ಟಣದ ಬೀದಿ ಅಲಂಕೃತಗೊಂಡಿವೆ. ದೇವಿ ಮೈದಾನದಲ್ಲಿ ಜಾತ್ರಾ ಮಂಟಪದ ಸಿದ್ಧತೆ ನಡೆದಿದೆ.ಜಾತ್ರಾ ಪೇಟೆಯ ಅಂಗಡಿ ಪ್ಲಾಟ್‌ಗಳ ಹರಾಜು ಮುಗಿದಿದ್ದು, ಈ ಬಾರಿ ಅತಿ ಹೆಚ್ಚಿನ ಬೆಲೆಗೆ ಜಾಗವನ್ನು ಜನ ಬಾಡಿಗೆಗೆ ಪಡೆದಿದ್ದಾರೆ. ಪಟ್ಟಣದಲ್ಲಿ ವರ್ಣರಂಜಿತ ಬೆಳಕಿನ ವ್ಯವಸ್ಥೆಗೆ ಕೆಲಸಕಾರ್ಯಗಳು ಜೋರಾಗಿ ನಡೆದಿದೆ. ಬೆಲ್ ರಸ್ತೆ ಡಾಂಬರಿಕರಣಗೊಂಡು ಜಾತ್ರೆಗೆ ಅಲಂಕೃತಗೊಳ್ಳುತ್ತಿದೆ.
ಶಿರಸಿ ರಸ್ತೆಯ ಹೆಸ್ಕಾಂ ಎದುರು ನಾಟಕ ಕಂಪನಿಯ ಟೆಂಟ್ ಹಾಕಲಾಗಿದೆ. ವೈಟಿಎಸ್‌ಎಸ್ ಹಾಗೂ ಮಾದರಿ ಶಾಲಾ ಮೈದಾನದಲ್ಲಿ ಅಮ್ಯೂಸಮೆಂಟ್ ಪಾರ್ಕಿನ ಐಟಂಗಳು ಬಂದಿವೆ. ಪೇಟೆಯ ತುಂಬ ಜಾತ್ರಾರ್ಥಿಗಳ ಸ್ವಾಗತಕ್ಕೆ ಕಟೌಟ್ ರಾರಾಜಿಸುತ್ತಿವೆ. ಈ ಬಾರಿ ಕಟ್ಟಿಗೆ ಡಿಪೋ ಬಳಿ ಜಾತ್ರಾ ಪ್ರಯುಕ್ತ ಯಾತ್ರಾರ್ಥಿಗಳಿಗೆ 7 ದಿವಸಗಳ ಕಾಲ ಮಧ್ಯಾಹ್ನ ಅನ್ನಪ್ರಸಾದ ನೀಡಲು ಸಾರ್ವಜನಿಕರು ಮುಂದಾಗಿದ್ದಾರೆ.