ಶಿರಸಿ: ಮಾತನಾಡುವ ಗೊಂಬೆಯೊದು ಗಣಿತ, ವಿಜ್ಞಾನ ಬೋಧಿಸಿದರೆ, ಮಕ್ಕಳ ಶೈಕ್ಷಣಿಕ ಪ್ರಶ್ನೆಗಳಿಗೆ ಉತ್ತರ ಕೊಟ್ಟರೆ ಎಷ್ಟೊಂದು ಪರಿಣಾಮಕಾರಿಯಾಗಬಹುದೆಂದು ತೋರಿಸುವಂತಹ ಪ್ರಯೋಗವೊಂದು ಶಿರಸಿಯಲ್ಲಿ ನಡೆದಿದೆ.
ಆಧುನಿಕ ತಂತ್ರಜ್ಞಾನದಿಂದ ತಾಲೂಕಿನ ನೆಮ್ಮದಿ ಕುಟೀರದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಸುಶಿಕ್ಷಾ ರೋಬೋ’ ಮಕ್ಕಳಿಗೆ ಬೋರಿಂಗ್ ಎನಿಸುವ ಕ್ಲಾಸ್ ರೂಮನ್ನು ಆಸಕ್ತಿದಾಯಕ ತಾಣವಾಗಿ ಮಾರ್ಪಾಡಿಸುತ್ತಿದೆ. ಮಕ್ಕಳು ಆಡುತ್ತಾ, ಮಾತನಾಡುತ್ತಾ ಹೊಸ ವಿಷಯಗಳನ್ನು ಕಲಿಯಲಿ ಎಂಬುದೇ ಈ ರೋಬೋ ಪರಿಕಲ್ಪನೆಯ ಉದ್ದೇಶ. ಗ್ರಾಮೀಣ ಭಾಗದಲ್ಲಿ ಹೊಸ ಹೊಸ ಅಧ್ಯಯನಗಳನ್ನ ನಡೆಸಲು ರಚಿಸಿಕೊಂಡಿರುವ ಡಾ.ವಿಕ್ರಂ ಸಾರಾಭಾಯಿ ಎಜುಕೇಶನ್ ರಿಸರ್ಚ್ ಸೆಂಟರ್‌ನ ಅಡಿಯಲ್ಲಿ ಈ ಸುಶಿಕ್ಷಾ ರೋಬೋ ತಯಾರಾಗಿದೆ. ಸೆಂಟರ್‌ನ ಸಂಸ್ಥಾಪಕ ಅಕ್ಷಯ್ ಮಾಶೇಲ್ಕರ್ ಯೋಜನೆಯಲ್ಲಿ, ಆದರ್ಶ ದೇವಾಡಿಗ ಹಾಗೂ ಯಶಸ್ವಿ ಸೇರಿದಂತೆ ಏಳೆಂಟು ಯುವ ತಂತ್ರಜ್ಞರ ಸಹಯೋಗದಲ್ಲಿ ಈ ರೋಬೋ ಸಿದ್ಧಗೊಂಡಿದೆ. ಮುದ್ದಾದ ಬಾಲಕಿಯಂತೆ ಕಾಣುವ ಈ ರೋಬೋ ಸದ್ಯ ಕನ್ನಡ ಮತ್ತು ಇಂಗ್ಲಿಷ್ ಮಾತನಾಡಬಲ್ಲದು.
ಕನ್ನಡ, ಇಂಗ್ಲಿಷ್, ವಿಜ್ಞಾನ, ಗಣಿತಗಳಿಗೆ ಸಂಬಂಧಿಸಿದ ಪಾಠಗಳನ್ನು ಈ ರೋಬೋದಲ್ಲಿ ಫೀಡ್ ಮಾಡಲಾಗಿದ್ದು, ಶಾಲೆಗಳಲ್ಲಿ ಹೊಸ ಕಲಿಕೆಗೆ ನೆರವಾಗಲಿದೆ. ಇನ್ನೊಂದು ವಿಶೇಷವೆಂದರೆ, ಗೂಗಲ್ ವಾಯ್ಸ್ನ ಬದಲು ಶುದ್ಧ ಭಾಷೆ ನೀಡಬೇಕೆಂಬ ಉದ್ದೇಶದಿಂದ ಈ ರೋಬೋಗೆ ಶ್ರೇಯಾ ಎನ್ನುವವರ ಧ್ವನಿಯನ್ನು ಕೂಡ ನೀಡಲಾಗಿದೆ. ಈಗಾಗಲೇ ಈ ಸುಶಿಕ್ಷಾ ರೋಬೋವನ್ನ ಹಲವು ಶಾಲೆಗಳಿಗೆ ಕೊಂಡೊಯ್ದು ಪ್ರಾಯೋಗಿಕವಾಗಿ ಮಕ್ಕಳಿಗೆ ಪಾಠ ಮಾಡಿಸಲಾಗಿದೆ.