ಅಂಕೋಲಾ: ಕರ್ನಾಟಕ ಶಾಲಾ ಶಿಕ್ಷಣ ಮತ್ತು ಮೌಲ್ಯ ನಿರ್ಣಯ ಮಂಡಳಿ ಮಾರ್ಚ 9 ರಿಂದ ರಾಜ್ಯ ಪಠ್ಯಕ್ರಮಕ್ಕೆ ಅನುಗುಣವಾಗಿ ನಡೆಸಲು ಉದ್ದೇಶಿಸಿರುವ 5 ಮತ್ತು 8ನೇ ತರಗತಿಯ ವಿದ್ಯಾರ್ಥಿಗಳಿಗೆ ಮೌಲ್ಯಾಂಕನ ಪರೀಕ್ಷೆಗೆ ಸಂಬಂಧಿಸಿದಂತೆ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಫೆ.27ರಂದು ಹಮ್ಮಿಕೊಳ್ಳಲು ನಿರ್ಣಯಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ತಿಳಿಸಿದರು.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೌಲ್ಯಾಂಕನಕ್ಕೆ ವಿದ್ಯಾರ್ಥಿಗಳನ್ನು ಸಿದ್ಧಗೊಳಿಸಲು ಸಾರ್ವಜನಿಕವಾಗಿ ಮೌಲ್ಯಾಂಕನದ ಬಗ್ಗೆ ಅರಿವು ಮೂಡಿಸಲು ಈ ಪರೀಕ್ಷೆ ಸಹಾಯಕವಾಗಲಿದೆ. ಕಲಿಕಾ ಚೇತರಿಕೆ ಹಾಗೂ ಪಠ್ಯ ಪುಸ್ತಕದ ಕಲಿಕಾಂಶಗಳ ಆಧಾರದ ಮೇಲೆ ಪ್ರಶ್ನೆ ಪತ್ರಿಕೆ ರಚನೆಯಾಗಿದ್ದು, ಇದೊಂದು ಕಲಿಕಾ ಸಂತಸದ ಪರೀಕ್ಷೆಯಾಗಿರುತ್ತದೆ. ಮುಂಬರುವ ಮೌಲ್ಯಾಂಕನ ಪರೀಕ್ಷೆಯು ಒಂದು ಅನುಭವವನ್ನು ಕಟ್ಟಿಕೊಡುತ್ತದೆ. ಸ್ಪರ್ಧಾತ್ಮಕ ಯುಗದಲ್ಲಿ ಇಂತಹ ಪರೀಕ್ಷೆಗಳು ಅನಿವಾರ್ಯವಾಗಿದ್ದು, ಕರೋನಾದ ನಂತರ ವಿದ್ಯಾರ್ಥಿಗಳ ಕಲಿಕೆಯನ್ನು ತಿಳಿಯಲು ಸಾಧನವಾಗಿದೆ. ಮೌಲ್ಯಾಂಕನವು ನವೆಂಬರ್‌ನಿಂದ ಮಾರ್ಚ್ ವರೆಗಿನ ಕಲಿಕಾಂಶಕ್ಕೆ ಸಂಬಂಧಿಸಿದ್ದಾಗಿರುತ್ತದೆ. ಶಿಕ್ಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಹೊರೆ ಆಗದ ರೀತಿಯಲ್ಲಿ ಪೂರ್ವ ಸಿದ್ಧತಾ ಪರೀಕ್ಷೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.
ಈ ಸಂದರ್ಭದಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕ ಮಂಜುನಾಥ ನಾಯಕ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ಜಿ. ನಾಯಕ ಹೊಸ್ಕೇರಿ, ಪ್ರಧಾನ ಕಾರ್ಯದರ್ಶಿ ರಾಜು ಎಚ್. ನಾಯಕ, ಶಿಕ್ಷಣ ಸಂಯೋಜಕ ಬಿ.ಎಲ್. ನಾಯ್ಕ, ಬಿ.ಆರ್.ಸಿ. ಮಂಜುನಾಥ ನಾಯ್ಕ ಸೇರಿದಂತೆ ಸಮೂಹ ಸಂಪನ್ಮೂಲ ವ್ಯಕ್ತಿಗಳು, ಶಾಲಾ ಮುಖ್ಯಾಧ್ಯಾಪಕರು ಇದ್ದರು.