ಶಿರಸಿ: ಈ ಬಾರಿಯದ್ದು ಟಿಪ್ಪು ಮತ್ತು ಸಾವರ್ಕರ್ ನಡುವೆ ನಡೆವ ಚುನಾವಣೆ ಎಂದಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿರುವ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್, ಈ ಬಾರಿಯದ್ದು ಸಾವರ್ಕರ್ ಹಾಗೂ ಅಂಬೇಡ್ಕರ್ ಸಿದ್ಧಾಂತದ ನಡುವೆ ನಡೆಯುವ ಚುನಾವಣೆ ಎಂದರು.
ಕರಾವಳಿ ಪ್ರಜಾಧ್ವನಿ ಯಾತ್ರೆ ಸಮಾರಂಭದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಟಿಪ್ಪು ಬಿಜೆಪಿಗರಂತೆ ಹೇಡಿಯಲ್ಲ, ಅವನೊಬ್ಬ ಸ್ವಾತಂತ್ರ‍್ಯ ವೀರ. ಬಿಜೆಪಿಗರು ಅಂಬೇಡ್ಕರ್ ಎನ್ನುತ್ತಾರೆ. ಆದರೆ ಮಾಡುವ ಕೆಲಸವೆಲ್ಲ ಸಾರ್ವಕರದ್ದಾಗಿದೆ. ಇದರ ಜೊತೆ ಗಾಂಧೀಜಿ ಕಂಡ ರಾಮರಾಜ್ಯದ ಬದಲು ಬೇರೆಯದೇ ಆದ ರಾಜ್ಯ ಬಿಜೆಪಿಗರ ಆಡಳಿತದಲ್ಲಿ ಕಾಣುತ್ತಿದೆ. ಹೀಗಾಗಿ ರಾಜ್ಯದ ಜತೆ ಹಿತದೃಷ್ಟಿಯಿಂದ ಯಾವ ಕಾರಣಕ್ಕೂ ಗೋಡ್ಸೆ ಸಂತತಿಗೆ ಗೆಲ್ಲಲು ಬಿಡುವುದಿಲ್ಲ ಎಂದರು.
ನಮ್ಮನ್ನು ಭಯೋತ್ಪಾದಕ ಪಕ್ಷವೆಂದು ಹೇಳುವ ಬಿಜೆಪಿ ನಿಜವಾದ ಭಯೋತ್ಪಾದಕ ಪಕ್ಷ. ಇವರ ಪೂರ್ವಜರು ಮಹಾತ್ಮ ಗಾಂಧಿಯನ್ನು ಕೊಂದವರು. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ಭಯೋತ್ಪಾದಕತೆ ಹುಟ್ಟು ಹಾಕಿದ್ದೆ ಬಿಜೆಪಿ. ಬ್ರಿಟೀಷರ ಏಜೆಂಟರಾಗಿರುವ ಈ ಪಕ್ಷದಿಂದ ನಮಗೆ ಸರ್ಟಿಫಿಕೇಟ್ ಬೇಕಾಗಿಲ್ಲ ಎಂದು ಹರಿಹಾಯ್ದರು.
ಬಿಜೆಪಿಗೆ ಚುನಾವಣೆ ಎದುರಿಸಲು ಸಾಧ್ಯವಾಗದ ಕಡೆಯಲ್ಲೆಲ್ಲ ಕೋಮುಗಲಭೆ ಎಬ್ಬಿಸಿ ಜನರಲ್ಲಿ ಭಾವನಾತ್ಮಕವಾದ ವಿಚಾರಗಳನ್ನು ತುಂಬಿ ಮೋಸದಿಂದ ಗೆಲ್ಲುತ್ತಿದ್ದಾರೆ. ಪರೇಶ ಮೇಸ್ತ ಹಾಗೂ ಇನ್ನಿತರ ಘಟನೆಯ ನಂತರ ಬಿಜೆಪಿಗರು ಸತ್ತ ಹೆಣದ ಮೇಲೆ ರಾಜಕೀಯ ನಡೆಸುವುದನ್ನು ಜನರಿಗೆ ಸ್ಪಷ್ಟವಾಗಿ ಗೊತ್ತಾಗಿದ್ದು, ಇದರ ಫಲವನ್ನು ಮುಂದಿನ ಚುನಾವಣೆಯಲ್ಲಿ ಉಣ್ಣಲಿದೆ ಎಂದರು.