ದಾಂಡೇಲಿ: ನಗರದ ಜೆ.ಎನ್.ರಸ್ತೆಯಲ್ಲಿ ಬರುವ ನಂದಗೋಕುಲ ಉದ್ಯಾನವನಕ್ಕೆ ಜಿಮ್ ಸಲಕರಣೆಗಳನ್ನು ಅಳವಡಿಸುವ ಕಾರ್ಯಕ್ಕೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಮುಂದಾಗಿದ್ದು, ಜಿಮ್ ಸಲಕರಣೆಗಳನ್ನು ಅಳವಡಿಸುವ ಕಾರ್ಯ ಬಹುತೇಕ ಅಂತಿಮಗೊoಡಿದೆ.
ನಗರದ ಬಹುತೇಕ ಜನರ ಅತ್ಯಂತ ಪ್ರೀತಿಯ ಉದ್ಯಾನವನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಈ ಉದ್ಯಾನವನದ ನಿರ್ವಹಣೆಯನ್ನು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ಕಳೆದ ಅನೇಕ ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ಇದೀಗ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯು ತನ್ನ ಸಿ.ಎಸ್.ಆರ್ ಯೋಜನೆಯ ಮೂಲಕ 5 ಲಕ್ಷ ರೂ. ಮೊತ್ತದ ಜಿಮ್ ಸಲಕರಣೆಗಳನ್ನು ಅಳವಡಿಸಿರುವುದಾಗಿ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ರಾಜೇಶ್ ತಿವಾರಿ ತಿಳಿಸಿದ್ದಾರೆ.