Slide
Slide
Slide
previous arrow
next arrow

ಫೆ.19ಕ್ಕೆ ಮುಂಬೈನಲ್ಲಿ ‘ಯಕ್ಷಕಲಾ ಸಂಗಮ’ ತಂಡದಿಂದ ‘ರಾವಣ ಅವಸಾನ’ ಪ್ರದರ್ಶನ

300x250 AD

ಶಿರಸಿ: ತಾಲೂಕಿನ ಭೈರುಂಬೆ ಗ್ರಾಮ ಪಂಚಾಯಿತಿಯ ಪುಟ್ಟ ಹಳ್ಳಿ ಗಡಿಗೆಹೊಳೆ. ಇಲ್ಲಿಯ ಮಹಿಳೆಯರು ಎಲ್ಲರಂತೆಯೇ ಅಡುಗೆ ಕಾರ್ಯ, ಕೃಷಿ ಕಾರ್ಯದಲ್ಲಿ ತೊಡಗಿಲೊಳ್ಳುತ್ತಾರೆ. ಆದರೆ, ಅವರಲ್ಲಿರುವ ಪ್ರತಿಭೆ ರಾಜ್ಯವೇ ಅವರತ್ತ ತಿರುಗಿ ನೋಡುವಂತೆ ಮಾಡಿದೆ. ನಾಡಿನ ಸಾಂಸ್ಕೃತಿಕ ಶ್ರೀಮಂತ ಕಲೆ, ಪರಿಶುದ್ಧ ಕನ್ನಡ ಕಲಾ ಪ್ರಕಾರವಾದ ಯಕ್ಷಗಾನ ಕಲೆ ಇಲ್ಲಿಯ ಮಹಿಳೆಯರಿಗೆ ಕರಗತವಾಗಿದೆ. ಯಕ್ಷಕಲಾ ಸಂಗಮ ಹೆಸರಿನೊಂದಿಗೆ ಇಲ್ಲಿಯ ಮಹಿಳೆಯರೇ ಹುಟ್ಟುಹಾಕಿಕೊಂಡ ಸಂಘಟನೆಗೆ ಈಗ ದೇಶದ ಮೂಲೆಮೂಲೆಯಿಂದಲೂ ಪ್ರದರ್ಶನ ನೀಡುವಂತೆ ಆಹ್ವಾನ ಬರುತ್ತಿದೆ.
ಯಕ್ಷಗಾನ ಕಲಾವಿದ ಸುಬ್ರಾಯ ಭಟ್ ಗಡಿಗೆಹೊಳೆ ಇಲ್ಲಿಯ ಮಹಿಳೆಯರಲ್ಲಿರುವ ಯಕ್ಷಗಾನ ಕಲೆ ಆಸಕ್ತಿ ಗಮನಿಸಿ, ಅವರಿಗೆ ತರಬೇತಿ ನೀಡಿ ಸೂಕ್ತ ಮಾರ್ಗದರ್ಶನ ಒದಗಿಸಿದ್ದಾರೆ. ಅವರ ಗರಡಿಯಲ್ಲಿ ಬೆಳೆದ ಸುಮಾ ಹೆಗಡೆ, “ಯಕ್ಷಕಲಾಸಂಗಮ” ಮಹಿಳಾ ಮತ್ತು ಮಕ್ಕಳ ಯಕ್ಷಗಾನ ಕೇಂದ್ರ ಸ್ಥಾಪಿಸುವ ಮೂಲಕ ಯಕ್ಷಗಾನದಲ್ಲಿ ಇನ್ನಷ್ಟು ಮಹಿಳೆಯರು, ಮಕ್ಕಳು ಪಾಲ್ಗೊಳ್ಳಲು ಕಾರಣರಾದರು. ಈ ಸಂಸ್ಥೆಯ ಮೂಲಕ , ಯಕ್ಷಗಾನಕ್ಕೆ ಸಂಬಂಧಿಸಿದ ಹಲವಾರು ಸಮಾಜ ಸೇವೆ ಪ್ರಾರಂಭವಾಯಿತು. ಮಕ್ಕಳಿಗೆ ಉಚಿತವಾಗಿ ಬೇಸಿಗೆ ಶಿಬಿರ, ಆಸಕ್ತ ಮಹಿಳೆಯರಿಗೆ ಯಕ್ಷಗಾನ ತಾಳಮದ್ದಳೆಯ ತರಬೇತಿ ಪ್ರಾರಂಭವಾಯಿತು.
ಇವುಗಳ ಜೊತೆಗೆ ಗಣೇಶ ನೇತ್ರಾಲಯ ಶಿರಸಿ ಇಲ್ಲಿಯ ನರ್ಸಗಳಿಗೆ ಯಕ್ಷಗಾನ ತರಬೇತಿ ನೀಡಿ ಒಳ್ಳೆಯ ಕಾರ್ಯಕ್ರಮ ಕೊಟ್ಟು, ಜನಮನ್ನಣೆ ಗಳಿಸಿದರು.
ಯಕ್ಷಗಾನ ಅಕಾಡೆಮಿಯವರ ಸಹಕಾರದಿಂದ ‘ಪ್ರೇರಣಾ’ ಸಂಸ್ಥೆಯ
ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡಲಾಯಿತು. ಸಂಸ್ಥೆಯ
ಕಾರ್ಯವನ್ನು ನೋಡಿದ ಹಲವಾರು ಸಂಘ ಸಂಸ್ಥೆಗಳು ಅವರನ್ನು
ಸನ್ಮಾನಿಸಿದೆ. ಹೀಗೆ ಈ ಮಹಿಳೆಯರ ಯಕ್ಷಗಾನದ ಪಯಣ ಎಲ್ಲರಿಗೂ
ಕಾಣುವ ರೀತಿಯಲ್ಲಿ ಬೆಳೆಯತೊಡಗಿತು.

ಕಲಾವಿದೆ ಸುಮಾ ಹೆಗಡೆ ಗಡಿಗೆಹೊಳೆ ಚಿಕ್ಕಂದಿನಿಂದಲೇ ಯಕ್ಷಗಾನದ ವಾತಾವರಣದಲ್ಲಿ ಬೆಳೆದಿದ್ದರೂ ಮದುವೆ, ಮಕ್ಕಳ ನಂತರದಲ್ಲಿ ಈ ಯಕ್ಷಗಾನ ಜಗತ್ತಿಗೆ ತೆರೆದುಕೊಂಡವರು. 2005 ರಲ್ಲಿ ಅವರ
ಯಕ್ಷಪಯಣ ಪ್ರಾರಂಭವಾಯಿತು. ವಿದ್ವಾನ್ ಸುಬ್ರಾಯ ಭಟ್ಟ ಅವರ ಪ್ರೋತ್ಸಾಹದೊಂದಿಗೆ ಕೌವಾಳೆ ಗಣಪತಿ ಭಾಗವತರ ಮಾರ್ಗದರ್ಶನದಲ್ಲಿ
ದೇಶದ ಹಲವೆಡೆ 400 ಕ್ಕೂ ಅಧಿಕ ಕಾರ್ಯಕ್ರಮ ಕೊಟ್ಟಿದ್ದಾರೆ. ಸಮಾಜಕ್ಕೆ ಮತ್ತು ಮುಂದಿನ ಪೀಳಿಗೆಗೆ ಏನು ಕೊಡಬಹುದು ಎಂಬ ನೆಲೆಯಲ್ಲಿ ಹುಟ್ಟಿದ ಯಕ್ಷಕಲಾಸಂಗಮ ಸಂಸ್ಥೆ ಅಡಿಯಲ್ಲಿ ಐವತ್ತಕ್ಕೂ ಹೆಚ್ಚು ಶಿಷ್ಯರು ಪಳಗಿದ್ದಾರೆ.

ಮುಂಬೈನಲ್ಲಿ ಪ್ರದರ್ಶನ ನೀಡಲಿರುವ ತಂಡ
ಮುಂಬೈನ ಹವ್ಯಕ ವೆಲ್ ಫೇರ್ ಟ್ರಸ್ಟ್ ಫೆ.19ರಂದು ಆಯೋಜಿಸಿರುವ ಕರ್ಕಿ ವೆಂಕಟ್ರಮಣ ಶಾಸ್ತ್ರಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಯಕ್ಷಕಲಾ ಸಂಗಮ ತಂಡ ‘ರಾವಣ ಅವಸಾನ’ ಯಕ್ಷಗಾನ ಪ್ರದರ್ಶನ ನೀಡಲಿದೆ. ಮುಮ್ಮೇಳದಲ್ಲಿ ಸುಮಾ ಗಡಿಗೆಹೊಳೆ, ಸಹನಾ ಜೋಶಿ, ಪ್ರೇಮಾ ಭಟ್, ಶೈಲಾ ದೊಡ್ಡೂರು, ಜ್ಯೋತಿ ಹೆಗಡೆ, ಸುನಂದಾ ಹೆಗಡೆ, ತನ್ಮಯ ಹೆಗಡೆ ಭಾಗವಹಿಸಲಿದ್ದರೆ, ಭಾಗವತರಾಗಿ ಗಜಾನನ ಭಟ್ ತುಳಗೇರಿ, ಮೃದಂಗದಲ್ಲಿ ಕೃಷ್ಣ ಹೆಗಡೆ, ಚಂಡೆಯಲ್ಲಿ ಪ್ರಶಾಂತ ಕೈಗಡಿ ಪಾಲ್ಗೊಳ್ಳಲಿದ್ದಾರೆ.

300x250 AD

Share This
300x250 AD
300x250 AD
300x250 AD
Back to top