ಸಿದ್ದಾಪುರ: ಚತುರ್ದೇವತೆಗಳ ವಾರ್ಷಿಕೋತ್ಸವ ನಿಮ್ಮಿತ್ತ ಫೆ.13ರಂದು ಹೆಗ್ಗರಣಿಯಲ್ಲಿ ‘ಸಮಗ್ರ ಕಂಸ’ ಯಕ್ಷಗಾನ ಪ್ರದರ್ಶನ ಕದಂಬೇಶ್ವರ ಯಜಕ್ಷಗಾನ ಮಂಡಳಿ ಹೆಗ್ಗರಣಿ ಅವರಿಂದ ನಡೆಯಿತು. ಶ್ರೀ ಉಪೇಂದ್ರ ಪೈ ಟ್ರಸ್ಟನ ಪ್ರಾಯೋಜಿಕತ್ವದಲ್ಲಿ ನಡೆದ ಕಾರ್ಯಕ್ರಮವನ್ನು ಕಲಾಪೋಷಕ ಸಾಮಾಜಿಕ ಮುಖಂಡ ಉಪೇಂದ್ರ ಪೈ ಉದ್ಘಾಟಿಸಿ, ಸಿದ್ದಾಪುರದ ಮಣ್ಣಿನ ಮಗನಾಗಿ ತಾನು ಯಕ್ಷಗಾನದಿಂದಲೇ ಉತ್ತಮ ಸಂಸ್ಕಾರವನ್ನು ಪಡೆದೆ ಎಂದರು. ಬಾಲ್ಯದಿಂದಲೂ ಹವ್ಯಾಸಿ ಯಕ್ಷಗಾನ ಮಂಡಳಿಗಳ ಮತ್ತು ಕಲಾವಿದರ ಬದುಕು ಬವಣೆಯ ಅನುಭವ ತನಗಿರುವ ಕಾರಣ ಯಕ್ಷಗಾನಕ್ಕೆ ಖುಷಿಯಿಂದ ಆದಷ್ಟು ಹೆಚ್ಚಿನ ಸಹಾಯ ಸಹಕಾರ ನೀಡುತ್ತಿದ್ದೇನೆ ಎಂದರು. ಇದು ಕಲಾಸಮೃದ್ಧಿಗೆ ತಾನು ನೀಡುವ ಕಿರುಕಾಣಿಕೆ ಎಂದರು.
ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿದ ನಿವೃತ್ತ ಪ್ರಾಚಾರ್ಯ ಯಕ್ಷಗಾನ ವಿದ್ವಾಂಸ ಮತ್ತು ಕಲಾವಿದ ಪ್ರೊ. ಡಾ. ಜಿ.ಎ.ಹೆಗಡೆ ಸೋಂದಾ ಹರ್ಷ ವ್ಯಕ್ತಪಡಿಸಿ, ಉಪೇಂದ್ರ ಪೈ ಅವರಂತಹ ಕಲಾ ಪೋಷಕರು, ಕಲಾ ಪ್ರೇಮಿ ಸಜ್ಜನರು ಇರುವ ಕಾರಣದಿಂದ ಸಾಂಸ್ಕೃತಿಕ ಲೋಕಕ್ಕೆ ತನ್ಮೂಲಕ ಕಲಾವಿದರಿಗೆ ಇಂತಹ ಪ್ರೋತ್ಸಾಹ ದೊರೆಯುತ್ತಿದೆ ಎಂದರು. ಈ ವರ್ಷ ಉಪೇಂದ್ರ ಪೈ ಅವರ ಟ್ರಸ್ಟಿನಿಂದ 20 ಹವ್ಯಾಸಿ ಯಕ್ಷಗಾನ ಮಂಡಳಿಗಳಿಗೆ ಯಕ್ಷಗಾನ ಪ್ರದರ್ಶನ ನೀಡಲು ಸಂಪೂರ್ಣ ಪ್ರಾಯೋಜಿಕತ್ವ ನೀಡಿರುವುದು ಜಿಲ್ಲೆಯಲ್ಲಿ ಈವರೆಗೆ ಯಾರೂ ನೀಡದ ಅಪ್ರತಿಮ ಕೊಡುಗೆಯಾಗಿದೆ ಎಂದರು. ಇದು ಪೈ ಟ್ರಸ್ಟಿನ ಪ್ರಾಯೋಜಿಕತ್ವದಲ್ಲಿ ನಡೆಯುತ್ತಿರುವ 9 ನೇಯ ಕಾರ್ಯಕ್ರಮವಾಗಿದ್ದು ಕಳೆದ ವರ್ಷವೂ 10 ಕಾರ್ಯಕ್ರಮಗಳಿಗೆ ಪ್ರಾಯೋಜಿಕತ್ವ ನೀಡಿದ್ದು ಈ ವರ್ಷ ಅದನ್ನು 20ಕ್ಕೆ ಏರಿಸಿದ್ದು ಅವರ ಕಲಾಪ್ರೇಮಕ್ಕೆ ಜ್ವಲಂತ ಸಾಕ್ಷಿಯಾಗಿದೆ. ಉಪೇಂದ್ರ ಪೈ ಅವರ ಸಾಂಸ್ಕೃತಿಕ ಸಂಸ್ಕಾರ, ಹೃದಯ ಶ್ರೀಮಂತಿಕೆ ತುಂಬಾ ದೊಡ್ಡದು ಸಜ್ಜನ ಸದ್ಗುಣಿಗಳಾದ ಅವರು ಸಹಾಯ ಹಸ್ತ ನೀಡುವಲ್ಲಿ ಮುಂಚೂಣಿಯಲ್ಲಿರುವ ಆಪ್ತರಾಗಿ, ಆತ್ಮೀಯರಾಗಿ ಮನೆಮಾತಾಗಿದ್ದಾರೆ ಎಂದರು.
ಅವಘಡಕ್ಕೆ ಒಳಗಾಗಿ ತುಂಬಾ ಕಷ್ಟದಲ್ಲಿರುವ ಯಕ್ಷಾರಾಧಕ ರಘುಪತಿ ನಾಯ್ಕ ಹೆಗ್ಗರಣಿ ಅವರಿಗೆ ಯಕ್ಷಗಾನವೆಂದರೆ ಜೀವನ ಗಾನ ಅದು ಅವರ ಜೀವನ ಯಾನ. ದೇವತಾ ಆರಾಧನೆ, ಅನ್ನ ಸಮಾರಾಧನೆ, ಸಂಜೆ ಯಕ್ಷಗಾನ ಕಲಾಆರಾಧನೆ, ಈ ಮೂರನ್ನು ಏರ್ಪಡಿಸುವ ಮೂಲಕ ಊರಿನ ಜನರ ಪ್ರೀತಿಗೆ ಕಾರಣರಾಗಿದ್ದಾರೆ ಎಂದು ವಿದ್ವಾಂಸ ಡಾ.ಜಿ.ಎ.ಹೆಗಡೆ ತಿಳಿಸಿ ರಘುಪತಿಯವರು ಬಹುಬೇಗ ಗುಣಮುಖರಾಗಿ ಪುನಃ ಗೆಜ್ಜೆ ಕಟ್ಟಲಿ ಎಂದು ಹಾರೈಸಿದರು.
ಅಭ್ಯಾಗತರಾಗಿ ಮಾತಾಡಿದ ಕವಿ ಜಿ.ವಿ.ಕೊಪ್ಪಲತೋಟ ಹವ್ಯಾಸಿಗಳಿಗೆ ಪ್ರೋತ್ಸಾಹ ದೊರೆತರೆ ಹಳ್ಳಿಯಲ್ಲಿ ಯಕ್ಷಗಾನ ಉಳಿಯುತ್ತದೆ ಎಂದರು. ಹಿರಿಯ ಕಲಾವಿದ ಜಾನಪದ ವಿದ್ವಾಂಸ ಜೆ.ಎಂ. ಭಟ್ಟ ಕೆ.ವಿ., ತಮ್ಮ ಶಿಷ್ಯ ರಘುಪತಿಯು ತುಂಬಾ ಪರಿಶ್ರಮದಿಂದ ಕದಂಬೇಶ್ವರ ಯಕ್ಷಗಾನ ಮಂಡಳಿಯನ್ನು ನಡೆಸಿಕೊಂಡು ಬಂದಿದ್ದಾರೆ ಎಂದರು. ಪಂಚಾಯತ್ ಸದಸ್ಯ ಅಬ್ದುಲ್ ಬಾರಿ ಸಾಮಾಜಿಕ ಧುರೀಣ ಶೇಖರ ನಾಯ್ಕ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು. ಹೆಗ್ಗರಣಿ ಸೊಸೈಟಿ ಅಧ್ಯಕ್ಷ ಎಂ.ಎಲ್. ಭಟ್ಟ ಅಧ್ಯಕ್ಷತೆ ವಹಿಸಿ ಇಂತಹ ಸಾಂಸ್ಕೃತಿಕ ಚಟುವಟಿಕೆಗಳು ಜನರಿಗೆ ಸಂಸ್ಕಾರ ನೀಡಿ ಸಂಸ್ಕೃತಿಯನ್ನು ಉಳಿಸುತ್ತದೆ ಎಂದರು.
ರಘುಪತಿ ನಾಯ್ಕ ಹೆಗ್ಗರಣಿ ತನ್ನ ಕಷ್ಟ ಕಾಲದಲ್ಲಿ ಮನಮಿಡಿದು ಸಹಕರಿಸಿದ ಊರಿನ ಮತ್ತು ಪರ ಊರಿನ ಸಜ್ಜನರನ್ನು ಸ್ಮರಿಸಿ ಮುಂದೆಯೂ ಯಕ್ಷಗಾನ ಸೇವೆಯನ್ನು ಮುಂದುವರೆಸುವ ಆಶಯ ವ್ಯಕ್ತಪಡಿಸಿ ವಂದನೆ ಸಲ್ಲಿಸಿದರು.
ನಂತರ ಸಮಗ್ರಕಂಸ ಯಕ್ಷಗಾನ ಪ್ರದರ್ಶನ ನಡೆಯಿತು. ಹಿಮ್ಮೇಳದಲ್ಲಿ ಭಾಗವತ ಗಜಾನನ ಹೆಗಡೆ ಮೂರೂರು, ಮದ್ದಲೆಗಾರ ವಿಠ್ಠಲ ಪೂಜಾರಿ, ಚಂಡೆಯಲ್ಲಿ ಗಂಗಾಧರ ಕಂಚಿಕೈ ಸಹಕರಿಸಿದರು. ಮುಮ್ಮೇಳದಲ್ಲಿ ನಾಟ್ಯಾಚಾರ್ಯ ಶಂಕರ ಭಟ್ಟ, ಆರ್.ಟಿ. ಭಟ್ಟ ಕಬ್ಗಾಲು, ಸದಾನಂದ, ರಾಜು ನಾಯ್ಕ ನಿಡಗೋಡ, ಉಮಾಕಾಂತ ಮಾದನಕಳ, ಈಶ್ವರ ಹೆಗಡೆ, ವಿನಾಯಕ ತಮ್ಮ ಕಲಾ ಚಾತುರ್ಯ ತೋರಿದರು.