ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಫೆಬ್ರವರಿ 17 ರಂದು ಮಂಡಿಸಲಿರುವ ಪ್ರಸಕ್ತ ಸಾಲಿನ ರಾಜ್ಯ ಬಜೆಟ್‌ನಲ್ಲಿ ಹೊಸ ಕೃಷಿ ನೀತಿಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ನೀತಿಯು ನೈಸರ್ಗಿಕ ಕೃಷಿಯ ಮೂಲಕ ಮಣ್ಣಿನ ಗುಣಮಟ್ಟವನ್ನು ಕಾಪಾಡಿಕೊಳ್ಳಲು, ಸುಧಾರಿಸಲು ಮತ್ತು ರಾಗಿ ಬೆಳೆಯಲು ರೈತರನ್ನು ಉತ್ತೇಜಿಸುತ್ತದೆ ಎಂದು ತಿಳಿದುಬಂದಿದೆ.
ಬೊಮ್ಮಾಯಿ ಅವರು ಕಳೆದ ವರ್ಷ ಮಂಡಿಸಿದ ಚೊಚ್ಚಲ ಬಜೆಟ್‌ನಲ್ಲಿ ಕೃಷಿ ಮತ್ತು ಸಂಬಂಧಿತ ವಲಯಗಳಿಗೆ 33,700 ಕೋಟಿ ರೂ ಮೀಸಲಿಟ್ಟಿದ್ದರು ರೈತ ಶಕ್ತಿ ಸೇರಿದಂತೆ ರೈತರಿಗೆ ಯಂತ್ರೋಪಕರಣಗಳನ್ನು ಖರೀದಿಸಲು ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಿದ್ದರು. ಗರಿಷ್ಠ 5 ಎಕರೆಗೆ ಒಳಪಟ್ಟು ಎಕರೆಗೆ 250 ರೂಪಾಯಿ ಡೀಸೆಲ್ ಸಬ್ಸಿಡಿಯನ್ನೂ ಘೋಷಿಸಿದ್ದರು. ಈ ಬಾರಿಯ ಬಜೆಟ್‌ನಲ್ಲಿ ರೈತರಿಗೆ ಆದ್ಯತೆ ನೀಡಲಾಗುವುದು ಎಂದು ಬೊಮ್ಮಾಯಿ ಇತ್ತೀಚೆಗೆ ಘೋಷಿಸಿದ್ದರು. ಇತ್ತೀಚಿನ ಕೇಂದ್ರ ಬಜೆಟ್‌ನಲ್ಲಿ ರೈತರಿಗೆ 1.25 ಲಕ್ಷ ಕೋಟಿ ರೂ. ಮೀಸಲಿಡಲಾಗಿತ್ತು. ಕೇಂದ್ರ ಬಜೆಟ್‌ನಲ್ಲಿ ಮಧ್ಯ ಕರ್ನಾಟಕದ ಭೂಮಿಗೆ ನೀರಾವರಿಗೆ ಸಹಾಯ ಮಾಡುವ ಬಹು ನಿರೀಕ್ಷಿತ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದೆ.
ಮಣ್ಣಿನ ಗುಣಮಟ್ಟಕ್ಕೆ ಒತ್ತು ನೀಡುವ ಕರ್ನಾಟಕ ಕೃಷಿ ನೀತಿಯನ್ನು ಪ್ರಕಟಿಸಲು ಮುಖ್ಯಮಂತ್ರಿಗಳಿಗೆ ಪ್ರಸ್ತಾವನೆ ಕಳುಹಿಸಲಾಗಿದೆ ಎಂದು ಬಲ್ಲ ಮೂಲಗಳು ಮಾಹಿತಿ ನೀಡಿವೆ. ರಾಸಾಯನಿಕಗಳ ಮಿತಿಮೀರಿದ ಬಳಕೆಯಿಂದ, ಮಣ್ಣಿನ ಗುಣಮಟ್ಟದಲ್ಲಿ ಕುಸಿಯುತ್ತಿದೆ. ಮಣ್ಣಿನ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡಲು, ನೈಸರ್ಗಿಕ ಕೃಷಿಯನ್ನು ಅಭ್ಯಾಸ ಮಾಡುವ ಅವಶ್ಯಕತೆಯಿದೆ. ಈ ಹಿನ್ನೆಲೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿಗಳು ಹೊಸ ನೀತಿಯನ್ನು ಘೋಷಿಸುವ ಭರವಸೆ ಇದೆ” ಎಂದು ಮೂಲಗಳು ತಿಳಿಸಿವೆ.
ಕೃಷಿ ಸಚಿವ ಬಿ.ಸಿ.ಪಾಟೀಲ್ ಕೂಡ ಮಣ್ಣಿನ ಗುಣಮಟ್ಟವನ್ನು ಪುನರುಜ್ಜೀವನಗೊಳಿಸುವಲ್ಲಿ ಆಸಕ್ತಿ ತೋರಿಸಿದ್ದು, ಕೃಷಿ ಪ್ರವಾಸೋದ್ಯಮ ಪ್ರಸ್ತಾಪಿಸುವಂತೆ ಮನವಿ ಮಾಡಿಕೊಂಡಿದೆ. ಕೃಷಿ ಪ್ರವಾಸೋದ್ಯಮದಲ್ಲಿ ಜನರು ರೈತರೊಂದಿಗೆ ಹೊಲಗಳಲ್ಲಿ ಸಮಯ ಕಳೆಯಲು ಅವಕಾಶ ಮಾಡಿಕೊಡಲಿದೆ. ಈ ಮೂಲಕ ಜನರು ಹಾಗೂ ರೈತರ ನಡುವಿನ ಅಂತರ ಕಡಿಮೆಯಾಗಲಿದೆ ಎಂದು ತಿಳಿಸಿದೆ ಎಂದು ತಿಳಿದುಬಂದಿದೆ.
ಕೃಷಿ ಹೊಂಡ ಯೋಜನೆಯಂತೆಯೇ ‘ಜಲನಿಧಿ’ ಯೋಜನೆಗೂ ಇಲಾಖೆ ಮುಂದಾಗಿದೆ. ಈ ಯೋಜನೆಯು ಅಂತರ್ಜಲವನ್ನು ಮರುಪೂರಣಗೊಳಿಸುತ್ತದೆ ಮತ್ತು ಮಣ್ಣಿನ ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ವರದಿಗಳು ತಿಳಿಸಿವೆ. ರಾಗಿ ಬೆಳೆಯಲು ರೈತರನ್ನು ಉತ್ತೇಜಿಸಲು ಯೋಜನೆಗಳನ್ನು ಘೋಷಿಸುವಂತೆ ನಾವು ಈಗಾಗಲೇ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದೇವೆ. ರಾಗಿ ಬೆಳೆಯುವುದರಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಈ ವರ್ಷ ಅಂತಾರಾಷ್ಟ್ರೀಯ ರಾಗಿ ವರ್ಷ. ಹೀಗಾಗಿ ರಾಗಿ ಬೆಳೆಯಲು ರೈತರನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದು ಮೂಲಗಳು ತಿಳಿಸಿವೆ.