ಕಾರವಾರ: ಕೋಳಿ ಸಾಕಾಣಿಕೆದಾರರಿಗೆ ಹಾಗೂ ಮಾಂಸ ಪ್ರಿಯರ ಹಿತರಕ್ಷಣೆಯ ನಿಟ್ಟಿನಲ್ಲಿ ಸಮಗ್ರ ಕಾನೂನನ್ನು ಬರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಘೋಷಣೆ ಮಾಡಬೇಕೆಂದು ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರ ರೈತರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಸಮಿತಿ ಆಗ್ರಹಿಸಿದೆ.
ಪ್ರತಿ ಲೀಟರ್ ಹಾಲಿಗೆ ನೀಡುತ್ತಿರುವ ಪ್ರೋತ್ಸಾಹ ಧನ ರೂ. 5 ರೀತಿಯಲ್ಲಿಯೆ ಪ್ರತಿ ಮಾಂಸದ ಕೋಳಿಗೆ ಪ್ರೋತ್ಸಾಹ ಧನವಾಗಿ 5 ರೂ. ಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೆ ನೀಡಬೇಕು. ಹಲವು ರಾಜ್ಯ ಸರ್ಕಾರಗಳು, ನಮ್ಮ ರಾಜ್ಯ ಸರ್ಕಾರದ ಕಂದಾಯ ಇಲಾಖೆಯು ಘೋಷಣೆ ಮಾಡಿರುವ ರೀತಿಯಲ್ಲಿ ಕೋಳಿ ಸಾಕಾಣಿಕೆಯನ್ನು,
ಕೃಷಿ ಎಂದು ಘೋಷಣೆ ಮಾಡಬೇಕು ಮತ್ತು ಕೃಷಿ, ರೇಷ್ಮೆ ಬೆಳೆಗಾರರಿಗೆ ನೀಡುತ್ತಿರುವ ಹಲವಾರು ಸೌಲಭ್ಯಗಳನ್ನು ಕೋಳಿ ಸಾಕಾಣಿಕೆದಾರ ರೈತರಿಗೂ ವಿಸ್ತರಿಸಬೇಕು. ಸುಮಾರು 10,000 ಕೋಳಿ ಸಾಕಾಣಿಕೆ ರೈತರು, ಹತ್ತಾರು ಕಂಪನಿಗಳು, ಹತ್ತಾರು ಸಾವಿರ ಸಗಟು, ಚಿಲ್ಲರೆ ವ್ಯಾಪಾರಸ್ಥರು, ಅಸಂಖ್ಯಾತ ಕೃಷಿ ಕೂಲಿಕಾರರು ಮತ್ತು ದೊಡ್ಡ ಪ್ರಮಾಣದ ಕೋಳಿ ಮಾಂಸ ತಿನ್ನುವ ಗ್ರಾಹಕರ ಹಿತಗಳನ್ನು ರಕ್ಷಿಸಲು ಮತ್ತು ಕುಕ್ಕುಟ್ಟ ಕ್ಷೇತ್ರವನ್ನು ಹೈನುಗಾರಿಕೆಯ ಕ್ಷೇತ್ರಕ್ಕಿಂತ ಬಲಿಷ್ಠವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಲಾಗಿದೆ.
ರಾಜ್ಯದಲ್ಲಿ ಸುಮಾರು 10,000 ಕೋಳಿ ಸಾಕಾಣಿಕೆದಾರ ರೈತರು ವಿವಿಧ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡು ಮಾಂಸದ ಕೋಳಿಗಳನ್ನು ಸಾಕಾಣಿಕೆ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಕುಕ್ಕುಟ ಕ್ಷೇತ್ರವು ಬಾರಿ ವೇಗವಾಗಿ ಬೆಳೆಯುತ್ತಿದೆ. ವಾರ್ಷಿಕ ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆಯುತ್ತಿದ್ದು, ಮತ್ತಷ್ಟು ಅಭಿವೃದ್ಧಿ ಮಾಡಲು ಉತ್ತಮ ಅವಕಾಶಗಳಿವೆ. ಆದರೆ ಸರ್ಕಾರಗಳು ಈ ಕುರಿತು ಕನಿಷ್ಠ ಗಮನವನ್ನು ಹರಿಸಿಲ್ಲ. ಇಂತಹ ಸ್ಥಿತಿಯಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕೋಳಿ ಸಾಕಾಣಿಕೆದಾರ ರೈತರು, ಸಂಘಟಿತರಾಗಿ ಕಳೆದ ಹತ್ತು ವರ್ಷಗಳಿಂದ ಹತ್ತಾರು ಹೋರಾಟಗಳನ್ನು ನಡೆಸಿದ್ದಾರೆ. ಫಲವಾಗಿ ಕಳೆದ 7- 8 ವರ್ಷಗಳಲ್ಲಿ ಸರ್ಕಾರದ ಮಟ್ಟದಲ್ಲಿ ಹಲವು ಸುತ್ತಿನ ಮಾತುಕತೆಗಳು ನಡೆದಿವೆ. ಸಾವಿರಾರು ಕೋಟಿ ರೂ.ಗಳ ವ್ಯವಹಾರ ಮತ್ತು ಲಕ್ಷಾಂತರ ಜನರಿಗೆ ಸಂಬoಧಪಟ್ಟ ಈ ಕ್ಷೇತ್ರದಲ್ಲಿ ಗಂಭೀರ ಲೋಪವನ್ನು ಸರಿಪಡಿಸಲು ಮತ್ತು ಈ ಕ್ಷೇತ್ರವನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ ಸಮಿತಿಯು ಮುಖ್ಯಮಂತ್ರಿಗೆ ಪತ್ರ ಬರೆದಿದೆ.