ಶಿರಸಿ: ತಾಲೂಕಿನ ಯಡಳ್ಳಿ ವಿದ್ಯೋದಯ ಪದವಿ ಪೂರ್ವ ವಿದ್ಯಾಲಯದ ಸಭಾಭವನದಲ್ಲಿ ‘ಯಡಳ್ಳಿ ಉತ್ಸವ’ದ ಅಂಗವಾಗಿ ಸಂಘಟಿಸಲಾಗಿದ್ದ ಸನ್ಮಾನ ಸಮಾರಂಭದಲ್ಲಿ ಕೃಷಿಕ ಗಾಗೂ ಖ್ಯಾತ ಕೊಳಲು ತಯಾರಕರಾದ ಮಂಜುನಾಥ ಹೆಗಡೆ ನೆಟ್ಟಗಾರರವರಿಗೆ ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.
ಪಂ.ಶ್ರೀಪಾದರಾವ್ ಕಲ್ಗುಂಡಿಕೊಪ್ಪ ಫೌಂಡೇಶನ್ ಹಾಗೂ ರಾಜದೀಪ ಟ್ರಸ್ಟ್ ಶಿರಸಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸನ್ಮಾನವನ್ನು ಶಿರಸಿ ಜೀವಜಲ ಕಾರ್ಯಪಡೆ ಹಾಗೂ ಪರಿವಾರ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ನೆರವೇರಿಸಿ ಮಾತನಾಡಿ ಎಲೆಮರೆ ಕಾಯಾಗಿ ಸಂಗೀತ ಸಾಧನ ತಯಾರಕರಾಗಿ ಕಲಾಸೇವೆ ಮಾಡುತ್ತಿರುವವರನ್ನು ಗುರುತಿಸಿ ಸನ್ಮಾನಿಸುವ ಕೆಲಸ ನಿಜಕ್ಕೂ ಶ್ಲಾಘನೀಯವೆಂದರು.
ಮುಖ್ಯಅತಿಥಿಯಾಗಿದ್ದ ಶಿರಸಿ ರಾಜದೀಪ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ದೀಪಕ ಹೆಗಡೆ ದೊಡ್ಡೂರ್ ಮಾತನಾಡಿ ಟ್ರಸ್ಟ್ನ ಕಾರ್ಯೋದ್ಧೇಶ ವಿವರಿಸಿ ಸಮಾಜದಲ್ಲಿರುವ ಅದೆಷ್ಟೋ ಪ್ರಾಮಾಣಿಕ ವ್ಯಕ್ತಿಗಳನ್ನು ಗುರುತಿಸುವ ಹಾಗೂ ಅವರನ್ನು ಪ್ರೋತ್ಸಾಹಿಸುವ ಕೆಲಸ ಮಾಡುವತ್ತ ಸಂಘಟನೆ ಮಾಡುತ್ತಿದ್ದೇವೆ ಎಂದರು.
ಶಿರಸಿ ಎಂ.ಇ.ಎಸ್. ಅಧ್ಯಕ್ಷ ಜಿ.ಎಂ. ಹೆಗಡೆ ಮುಳಖಂಡ ಮಾತನಾಡಿ ಸಂಘಟನೆ ಸುಲಭವಾದುದಲ್ಲ. ಹಾಗೆ ಅನುಭವಿ ಕಲಾವಿದರ ಕಾರ್ಯಕ್ರಮ ಏರ್ಪಡಿಸಿ ಅಭಿಮಾನಿಗಳಿಗೆ ಅದರ ರಸದೂಟ ಬಡಿಸುವುದು ನಿಜಕ್ಕೂ ಹೆಮ್ಮೆಯ ಸಂಗತಿ ಎಂದರು.
ವಕೀಲರು ಹಾಗೂ ಶಿರಸಿ ಟಿ.ಎಸ್.ಎಸ್. ನಿರ್ದೇಶಕ ಶಶಾಂಕ ಹೆಗಡೆ ಮಾತನಾಡುತ್ತ ಗ್ರಾಮೀಣ ಭಾಗದಲ್ಲಿ ಶಾಸ್ತ್ರೀಯಬದ್ಧವಾದ ಸಂಘಟನೆ ಹಾಗೂ ಸಾಧಕರಿಗೆ ಸನ್ಮಾನ ನಡೆಸುವ ಪ್ರಯತ್ನವನ್ನು ಶ್ಲಾಘಿಸಿದರು.
ನೋಟರಿ ಹಾಗೂ ವಕೀಲ ರಾಜೇಂದ್ರ ಹೆಗಡೆ ತಟ್ಟೀಸರ ಮಾತನಾಡಿ ಟ್ರಸ್ಟ್ಗಳನ್ನು ರಜಿಸ್ಟರ್‌ಗೊಳಿಸುವ ಹಾಗೂ ಅದರ ಮಹತ್ವದ ಕುರಿತಾಗಿ ವಿವರಿಸಿದರು. ಶಿರಸಿ ಲಯನ್ಸ್ ಕ್ಲಬ್‌ನ ಮಾಜಿ ಅಧ್ಯಕ್ಷ ಲೋಕೇಶ್ ಹೆಗಡೆ ಪ್ರಗತಿ ಮತ್ತು ಶಿರಸಿ ಯಕ್ಷಗೆಜ್ಜೆ ಸಂಸ್ಥಾಪಕ ಅಧ್ಯಕ್ಷೆ ನಿರ್ಮಲಾ ಹೆಗಡೆ ಗೊಳಿಕೊಪ್ಪ, ಮಾಧ್ಯಮಿಕ ಶಿಕ್ಷಣ ಪ್ರಸಾರಕ ಸಮಿತಿ ಗೌರವ ಕಾರ್ಯದರ್ಶಿ ಎಂ.ವಿ.ಹೆಗಡೆ ಕಾನಗೋಡ ಮಾತನಾಡಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಕಾನಗೋಡ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ನಿರ್ದೇಶಕ ಮಂಜುನಾಥ ಹೆಗಡೆ ಕಬ್ನಳ್ಳಿ, ನಿವೃತ್ತ ಜಿ.ಪಂ.ಪ್ರಥಮ ದರ್ಜೆ ನೌಕರರಾದ ಸುನಂದಾ ಅಶೋಕ ಹಾಸ್ಯಗಾರ ಉಪಸ್ಥಿತರಿದ್ದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಕೊಳಲು ತಯಾರಕ ಎಂ.ವಿ. ಹೆಗಡೆ ನೆಟ್ಟಗಾರ್‌ರವರು ಕೊಳಲಿನ ತಯಾರಿಕೆಗೆ ತಮಗಾದ ಸ್ಪೂರ್ತಿ, ಅದರ ನಿರ್ಮಾಣದಲ್ಲಿ ಇರುವ ಎಚ್ಚರಿಕೆ ವಿವರಿಸುತ್ತ ಗುರುತಿಸಿ ಸನ್ಮಾನಿಸಿದ್ದಕ್ಕೆ ಕೃತಜ್ಞತೆ ಸಲ್ಲಿಸಿದರು.
ವಿದ್ಯೋದಯ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಡಾ.ಆರ್.ಟಿ.ಭಟ್ಟ ಸ್ವಾಗತಿಸಿದರೆ, ಮಾ.ಶಿ.ಪ್ರ.ಸ. ಪ್ರೌಢಶಾಲಾ ಮುಖ್ಯಾಧ್ಯಾಪಕ ಕೆ.ಜಿ.ಭಟ್ಟ ಮಶೀಗದ್ದೆ ಸನ್ಮಾನ ಪತ್ರ ವಾಚಿಸಿದರು. ಕಾರ್ಯಕ್ರಮ ಸಂಘಟಕ ಗಿರಿಧರ ಹೆಗಡೆ ಕಬ್ನಳ್ಳಿ ಪ್ರಾಸ್ತಾವಿಕ ಮಾತನಾಡಿ, ನಿರೂಪಿಸಿದರು.
ಯಡಳ್ಳಿಯಲ್ಲಿ ಕೊಳಲು ತಯಾರಕ ಮಂಜುನಾಥ ನೆಟ್ಗಾರಗೆ ಹೃದಯಸ್ಪರ್ಶಿ ಸನ್ಮಾನ
