ಹಳಿಯಾಳ: ಜಿಲ್ಲಾ ಕುಸ್ತಿ ಅಖಾಡದಲ್ಲಿ ವಿಆರ್ ದೇಶಪಾಂಡೆ ಮೇಮೋರಿಯಲ್ ಟ್ರಸ್ಟ್, ರಾಜ್ಯ ಕುಸ್ತಿ ಅಸೋಸಿಯೇಷನ್ ಆಶ್ರಯದಲ್ಲಿ ದಿ.ವಿಶ್ವನಾಥರಾವ್ ದೇಶಪಾಂಡೆ ಅವರ ಸ್ಮರಣಾರ್ಥ ಫೆ.4ರಿಂದ 6ರವರೆಗೆ 3 ದಿನಗಳ ಕಾಲ ನಡೆದ ರಾಜ್ಯ ಮತ್ತು ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ಫೈನಲ್ ಪಂದ್ಯಾವಳಿಯಲ್ಲಿ ಭಾರತೀಯ ನೌಕಾಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ದೀಪಕ ಪುನಿಯಾರವರು ಶ್ರೀಚನ್ನಬಸವೇಶ್ವರ ಮಹಾನ್ ಭಾರತ ಕೇಸರಿ ಪ್ರಶಸ್ತಿ ತಮ್ಮದಾಗಿಸಿಕೊಂಡರು.
ಹರಿಯಾಣದ ಗೌತಮರವರನ್ನು ಮಣಿಸಿ ಬೆಳ್ಳಿಗಧೆ, 2.25 ಲಕ್ಷ ರೂ. ಮೊತ್ತದ ನಗದು ಬಹುಮಾನವನ್ನು ಅವರು ತಮ್ಮದಾಗಿಸಿಕೊಂಡರು. ಮಹಿಳಾ ವಿಭಾಗದ ವೀರರಾಣಿ ಕಿತ್ತೂರ ಚೆನ್ನಮ್ಮ ಮಹಾಭಾರತ ಕೇಸರಿ ಪ್ರಶಸ್ತಿಯನ್ನು ಹರಿಯಾಣದ ಪೊಲೀಸ್ ಅಧಿಕಾರಿ ಸುಮನ ಕುಂಡುರವರು ಮಹಾರಾಷ್ಟ್ರದ ಸೃಷ್ಟಿ ಯವರನ್ನು ಪರಾಜಿತಗೊಳಿಸಿ 50 ಸಾವಿರ ರೂ ನಗದು, ಬೆಳ್ಳಿಗದೆ, ಪ್ರಶಸ್ತಿ ತಮ್ಮದಾಗಿಸಿಕೊಂಡರು.
17 ವರ್ಷದೊಳಗಿನ ಬಾಲಕ- ಬಾಲಕಿಯರ ರಾಜ್ಯಮಟ್ಟದ ಕುಸ್ತಿ ಸ್ಪರ್ದೆಯಲ್ಲಿ ಎರಡು ವಿಭಾಗದಲ್ಲಿ ಹಳಿಯಾಳದ ಪಟುಗಳು ಅತ್ಯಂತ ಹೆಚ್ಚಿನ ಪದಕಗಳನ್ನು ಗಳಿಸುವ ಮೂಲಕ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.
ವಿವಿಧ ಬಿರುದು (ಟೈಟಲ್ಸ್) ಗಳಿಗಾಗಿ ನಡೆದ ಪಂದ್ಯಾವಳಿಯಲ್ಲಿ ಪುರುಷರ ವಿಭಾಗದ 74+ ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಕಂಠೀರವ ಪ್ರಶಸ್ತಿಯನ್ನು ಗೋಪಾಲ ಕೊಳಿ (ಎಮ್ ಇಜಿ) ಮತ್ತು ದ್ವಿತೀಯ ಪಾಂಡುರoಗ ಶಿಂಧೆ ಪಡೆದರು. 74 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ಅಥಣಿಯ ಮಹೇಶ ಲಂಗೋತ್ರಿ ಹಾಗೂ ಬೆಳಗಾವಿಯ ಮಲ್ಲೇಶ ಮೇತ್ರಿ (ದ್ವಿತಿಯ), ಕರ್ನಾಟಕ ಚಾಂಪಿಯನ್ ಪ್ರಶಸ್ತಿಯನ್ನು (57 ಕೆ.ಜಿ. ವಿಭಾಗ) ಹಳಿಯಾಳದ ರೋಹನ ದೊಡ್ಮನಿ ಹಾಗೂ ಬೆಳಗಾವಿಯ ಬಲರಾಜ ಚೌಗಲೆ (ದ್ವಿತೀಯ), 61 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಚಾಂಪಿಯನ್ ಪ್ರಶಸ್ತಿಯನ್ನು ಮುಧೋಳದ ಆನಂದ ಎಚ್. ಮತ್ತು ಹಳಿಯಾಳದ ನೀಲಪ್ಪಾ ಭುಜಿ (ದ್ವಿತೀಯ), 65 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಕಿಶೋರ ಪ್ರಶಸ್ತಿಯನ್ನು ಬಾಗಲಕೊಟದ ಸಚಿನ ಶಿರಗುಪ್ಪಿ ಮತ್ತು ಬೆಂಗಳೂರಿನ ರಮೇಶ ಹೊಸಕೋಟಿ (ದ್ವಿತೀಯ), 70 ಕೆ.ಜಿ. ವಿಭಾಗದಲ್ಲಿ ಕರ್ನಾಟಕ ಕುಮಾರ ಪ್ರಶಸ್ತಿಯನ್ನು ಬೆಳಗಾವಿಯ ರೋಹನ ಗೆವಡೆ ಹಾಗೂ ಸುನೀಲ ಮೇತ್ರಿ (ದ್ವಿತೀಯ) ಪಡೆದುಕೊಂಡರು.
ಮಹಿಳಾ ವಿಭಾಗದಲ್ಲಿ 55 +ಕೆ.ಜಿ. ವಿಭಾಗದಲ್ಲಿ ವೀರಮಾತಾ ಒನಕೆ ಓಬವ್ವ ಕರ್ನಾಟಕ ಕೇಸರಿ ಪ್ರಶಸ್ತಿಯನ್ನು ಹಳಿಯಾಳದ ಪ್ರಿನ್ಸಿಟಾ ಪಿಎಸ್ ಮತ್ತು ಬೆಳಗಾವಿಯ ಸೀಮಾ ಪಾಟೀಲ (ಬೆಳ್ಳಿ ಪದಕ), 50 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ಶಾಲೀನಾ ಸಿದ್ದಿ(ಬಂಗಾರ) ಹಾಗೂ ಗೋಪವ್ವ ಎಮ್.ಕೆ. (ಬೆಳ್ಳಿ), 55 ಕೆ.ಜಿ. ವಿಭಾಗದಲ್ಲಿ ಹಳಿಯಾಳದ ಲಕ್ಷ್ಮಿ ಎಸ್ ಪಾಟೀಲ(ಬಂಗಾರ) ಬೆಳಗಾವಿಯ ಐಶ್ವರ್ಯ ಕಾರಿಗಾರ (ಬೆಳ್ಳಿ) ಪಡೆದರು.
ವಿಜೇತರಿಗೆ ಪ್ರಶಸ್ತಿಗಳನ್ನು ಶಾಸಕ ಆರ್ ವಿ ದೇಶಪಾಂಡೆ, ಪ್ರಮುಖರಾದ ಪ್ರಶಾಂತ ದೇಶಪಾಂಡೆ, ಪ್ರಸಾದ ದೇಶಪಾಂಡೆ, ಪುರಸಭೆ ಅಧ್ಯಕ್ಷ ಅಜರುದ್ದೀನ್ ಬಸರಿಕಟ್ಟಿ, ಉಪಾಧ್ಯಕ್ಷೆ ಸುವರ್ಣಾ ಮಾದರ, ಪ್ರಮುಖರಾದ ಹುಬ್ಬಳ್ಳಿಯ ಯಶವಂತ ಸ್ವಾಮೀಜಿ, ಕೃಷ್ಣಾ ಪಾಟೀಲ್, ಸುಭಾಷ ಕೊರ್ವೆಕರ, ಅನಿಲ ಚವ್ವಾಣ, ಉಮೇಶ ಬೊಳಶೆಟ್ಟಿ ಇತರರು ವಿತರಿಸಿದರು. ಕುಸ್ತಿ ತರಬೇತುದಾರರಾದ ತುಕಾರಾಮ ಗೌಡಾ, ಬಿ.ಶಂಕ್ರಪ್ಪಾ, ಮಂಜುನಾಥ, ಹನುಮಂತ ಪಾಟೀಲ್, ಶಿವಪ್ಪಾ ಪಾಟೀಲ್, ಕೃಷ್ಣಾ ಪಾಟೀಲ್, ಶಿವಾನಂದ, ಮಮತಾ ಕೆಳೊಜಿ, ಜಿನ್ನಪ್ಪ ಕುಂದಗೊಳ, ಶಾನುರ ಅಲಿ, ಬಾಳಕೃಷ್ಣಾ ದಡ್ಡಿ, ರಮೇಶ ದುಸಗಿ, ಗದಗೆಪ್ಪ ಯಳ್ಳೂರ್ ಇನ್ನೂ ಅನೇಕರು ಪಂದ್ಯಾವಳಿ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.