ಹೊನ್ನಾವರ: ತಾಲೂಕಿನ ಅರೇಅಂಗಡಿಯ ಎಸ್‌ಕೆಪಿ ಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಹಮ್ಮಿಕೊಂಡ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ವಿಜೃಂಭಣೆಯಿoದ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಲೆಕ್ಕ ಪರಿಶೋಧಕ ಜಿ.ಎಂ.ಹೆಗಡೆ ಹುಕ್ಲಮಕ್ಕಿ, ಬದುಕಿನಲ್ಲಿ ಸೋಲು ನಮಗೆ ಬಹುದೊಡ್ಡ ಪಾಠ ಕಲಿಸುತ್ತದೆ. ಅಂತಹ ಸೋಲಿನಿಂದ ದೃತಿಗೆಡದೆ ಅದನ್ನು ಸವಾಲಾಗಿ ಸ್ವೀಕರಿಸಿ ಗೆಲುವನ್ನು ದೊರಕಿಸಿಕೊಳ್ಳಬೇಕು. ಜೀವನದಲ್ಲಿ ಗೆಲುವನ್ನು ಆಗಾಗ ಅನುಭವಿಸುತ್ತಾ ಹೋಗಬೇಕು. ಗೆಲುವಿನ ಹುಚ್ಚನ್ನು ಬೆಳೆಸಿಕೊಳ್ಳಬೇಕು. ನೆನಪಿನ ಮಾತು ಮಧುರ ಎನ್ನುವ ಹಾಗೆ ಬಾಲ್ಯದ ನೆನಪುಗಳು ನಮಗೆ ಸದಾ ಹಸಿರಾಗಿರುವಂತದ್ದು, ಆ ದಿನಗಳಲ್ಲಿಯೇ ನಾವು ಗೆಲುವನ್ನು ತಮ್ಮದಾಗಿಸಿಕೊಳ್ಳುವತ್ತ ಚಿತ್ತವನ್ನು ಕೇಂದ್ರೀಕರಿಸಿದಾಗ ಮುಂದೊoದು ದಿನ ಸಾಧನೆ ನಮ್ಮದಾಗುತ್ತದೆ ಎಂದರು.
ಮುಖ್ಯ ಅತಿಥಿ ಸಾಹಿತಿ, ನಿವೃತ್ತ ಪ್ರಾಧ್ಯಾಪಕ ಡಾಕ್ಟರ್ ಶ್ರೀಪಾದ್ ಶೆಟ್ಟಿ ಮಾತನಾಡಿ, ಮಾತೃ ಸಂಸ್ಥೆಯ ಸಳೆತ ನಮ್ಮನ್ನು ಇಲ್ಲಿಯವರೆಗೆ ಕರೆತಂದಿದೆ. ಆ ನೆನಪುಗಳಿಂದ ನಾವಿಂದು ದನ್ಯತೆ ಬೆಳೆಸಿಕೊಂಡಿದ್ದೇವೆ. ಓದಿರುವ ಮನುಷ್ಯ ಹಗುರಗುತ್ತಾ ಹೋಗುತ್ತಾನೆ. ಖರ್ಚಾದಷ್ಟು ಅದರ ಒರತೆ ಹೆಚ್ಚಾಗುತ್ತಾ ಸಾಗುವ ವಿದ್ಯೆ ಕೊಟ್ಟ ಶಾಲೆ ಸಂಸ್ಕೃತಿಯ ಬೀಡಾಗಿದೆ. ಈ ಶಾಲೆಯಲ್ಲಿ ಸಾಧಕರನ್ನು ಪ್ರತಿಭಾನ್ವಿತರನ್ನು ಗೌರವಿಸುತ್ತಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಾಚಾರ್ಯ ವಿ.ಎನ್.ಭಟ್ಟ ಮಾತನಾಡಿ, ಶಾಲೆಗಳಲ್ಲಿ ಪೂರ್ವ ವಿದ್ಯಾರ್ಥಿ ಸಂಘ ಆಡಳಿತಕ್ಕೆ ಬೆನ್ನೆಲುಬಾಗಿ ನಿಂತಿರುತ್ತದೆ, ಒಳ್ಳೆಯ ಕಾರ್ಯಗಳು ಈ ಸಂಘದಿoದ ನಡೆಯುತ್ತವೆ. ಅಂತೆಯೇ ಈ ಶಾಲೆಯಲ್ಲಿಯೂ ಎಸ್‌ಕೆಪಿ ಪೂರ್ವ ವಿದ್ಯಾರ್ಥಿ ಸಂಘದಿoದ ಕಳೆದ ಅನೇಕ ವರ್ಷಗಳಿಂದ ಇಂತಹ ಮೌಲ್ಯಯುತವಾದ ಕಾರ್ಯಕ್ರಮಗಳು ನಡೆಯುತ್ತಾ ಬಂದಿದೆ ಎಂದು ಸಂಘಟನೆಯ ಕುರಿತಾಗಿ ಅಭಿಮಾನ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವೇದಮೂರ್ತಿ ಸುಬ್ರಹ್ಮಣ್ಯ ಭಟ್ಟ ಮಾತನಾಡಿ, ಈ ಶಾಲೆ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕನ್ನು ನೀಡಿದೆ. ಆ ವಿದ್ಯಾರ್ಥಿಗಳಿಂದು ದೇಶ ವಿದೇಶಗಳಲ್ಲಿ ನೆಲೆ ನಿಂತು ಸಾಧನೆಗೈಯುತ್ತಿದ್ದಾರೆ. ಅಂತವರು ಇಲ್ಲಿಯ ನೆನಪನ್ನು ಮಾಡಿಕೊಳ್ಳುವಂತೆ ಎಸ್‌ಕೆಪಿ ಪೂರ್ವ ವಿದ್ಯಾರ್ಥಿ ಸಂಘ ಒಳ್ಳೆಯ ಕಾರ್ಯಕ್ರಮ ಮಾಡುತ್ತಾ ಬಂದಿದೆ. ಈ ಸಂಘ ಶಾಲೆಯ ಅಭಿವೃದ್ಧಿಯಲ್ಲಿ ಕೈಜೋಡಿಸಿ ಮುಂದಿನ ಪೀಳಿಗೆಗೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕೆಲಸಮಾಡಲಿ ಎಂಬ ಶುಭಾಶೀರ್ವಾದ ನೀಡಿದರು.
ಈ ಸಂದರ್ಭದಲ್ಲಿ ಮುಖ್ಯಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದ ಮುಕಾಂಬೆ ಎಸ್.ಭಟ್ಟ, ಜಿ.ಆರ್.ನಾಯ್ಕ ಮತ್ತು ಯಕ್ಷಗಾನ ಕಲಾವಿದ ಶಂಕರ್ ಹೆಗಡೆ ನೀಲ್ಕೋಡು, ಜಿ.ಎಂ.ಹೆಗಡೆ ಹುಕ್ಲಮಕ್ಕಿ ಅವರನ್ನು ಸನ್ಮಾನಿಸಲಾಯಿತು. ಅಲ್ಲದೇ ಶೈಕ್ಷಣಿಕ ಸಾಧನೆ ಮಾಡಿದ ಮಯೂರ್ ಹೆಗಡೆ ಹರಿಕೇರಿ, ವಿಭಾ ವಿನಾಯಕ ಭಟ್ಟ, ಮಲ್ಲಿಕಾ ಹೆಗಡೆ, ತುಷಾರ್ ಎ.ನಾಯ್ಕ ಅವರನ್ನು ಪುರಸ್ಕರಿಸಲಾಯಿತು.
ಉಪನ್ಯಾಸಕ ಪ್ರಶಾಂತ್ ಹೆಗಡೆ ಮೂಡಲ ಸ್ವಾಗತಿಸಿದರು. ಶಿಕ್ಷಕ ಸಂದೀಪ್ ಭಟ್ಟ ಪ್ರಾಸ್ತಾವಿಕ ನುಡಿಯಾಡಿದರು. ಶಿಕ್ಷಕಿ ಮಂದಾರ ನಾಯ್ಕ ನಿರೂಪಿಸಿದರು. ಚಿಕ್ಕ ಮಕ್ಕಳಿಂದ ವೀರಮಣಿ ಕಾಳಗ ಯಕ್ಷಗಾನ ಜನಮನ ಸೂರೆಗೊಂಡಿತು. ಪೂರ್ವಿ ಜಿ.ನಾಯ್ಕ ಅವರನ್ನು ಭರತನಾಟ್ಯ ಪ್ರದರ್ಶನಗೊಂಡಿತು. ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಸೌರಭ ನಡೆಯಿತು. ಕಾರ್ಯಕ್ರಮದಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಪದಾದಿಕಾರಿಗಳಾದ ಪಿ.ಕೆ.ಹೆಗಡೆ, ಮಯ್ಯು ನಾಯ್ಕ, ಎಂ.ಜಿ.ಹೆಗಡೆ, ಶ್ರೀಧರ ನಾಯ್ಕ, ವಿಠಲ ಭಂಡಾರಿ,ಮಾಜೀದ್ ಪ್ರಸನ್ನ, ಸುಭಾಸ್ ಉಪಸ್ಥಿತರಿದ್ದರು.