ಕುಮಟಾ : ಯುವಾ ಬ್ರಿಗೇಡ್ ಕುಮಟಾ ತಂಡದ ವತಿಯಿಂದ ತಾಲೂಕಿನ ಮಿರ್ಜಾನಿನ ಸನಿಹದ ತಾರಿಬಾಗಿಲಿನಲ್ಲಿ ಅಘನಾಶಿನಿ ನದಿಗೆ ವಿಶೇಷ ರೀತಿಯಲ್ಲಿ ಆರತಿಯನ್ನು ಮಾಡುವ ಮೂಲಕ “ಅಘನಾಶಿನಿ ಆರತಿ” ಕಾರ್ಯಕ್ರಮ ಸಂಪನ್ನಗೊಂಡಿತು. ಅಘನಾಶಿನಿ ನದಿಯ ದಡದ ಸುತ್ತಮುತ್ತಲೂ ಸಾಲಂಕೃತ ವಿದ್ಯುತ್ ದೀಪಗಳ ಅಲಂಕಾರ ಕಂಗೊಳಿಸಿದರೆ, ಭಾರತ ಮಾತೆಯ ಪೂಜೆಯನ್ನು ಮಾಡಿ ಗಂಗಾ ಆರತಿಯ ರೂಪದಲ್ಲಿ ಏಳು ನಿಮಿಷಗಳ ವಿಶೇಷ ಆರತಿ ಮಾಡಲಾಯಿತು.
ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ, ಅಘನಾಶಿನಿಯ ಮಹತ್ವ ತಿಳಿಸುತ್ತಾ, ಬೆಲೆ ಕಟ್ಟಲಾಗದ ಅಮೂಲ್ಯ ಸಂಪತ್ತು ಎಂದರೆ ಪ್ರಕೃತಿ ಮಾತೆ ನಮಗೆ ನೀಡಿದ ಜಲವಾಗಿದೆ. ಅದರ ಸದ್ಬಳಕೆ ಹಾಗೂ ಸ್ವಚ್ಛತೆಯ ಬಗ್ಗೆ ಗಮನ ನೀಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ತಿಳಿಸಿದರು.ಮುಂದಿನ ದಿನಗಳಲ್ಲಿಯೂ ಇಂತಹ ಕಾರ್ಯಕ್ರಮವನ್ನು ಮಾಡುವಂತೆ ಸೂಚಿಸಿದರು.
ಆದಿಚುಂಚನಗಿರಿ ಕುಮಟಾ ಶಾಖಾಮಠದ ಪೂಜ್ಯ ಶ್ರೀ ನಿಶ್ಚಲಾನಂದನಾಥ ಸ್ವಾಮೀಜಿಯವರು ಮೀನುಗಾರರ ಜೀವನ ಹಾಗೂ ನದಿಯ ಬಾಂಧವ್ಯವನ್ನು ತಿಳಿಸಿದರು. ಪ್ರತಿಯೊಂದು ಜೀವರಾಶಿಗೂ ಬದುಕುವ ಹಕ್ಕಿದೆ. ಅವುಗಳನ್ನ ಉಳಿಸುವ ಕರ್ತವ್ಯ ನಮ್ಮೆಲ್ಲರದ್ದು. ನಮ್ಮ ಕರ್ತವ್ಯ ನಮ್ಮಲ್ಲಿ ಜಾಗೃತವಾಗಿರಬೇಕು ಎಂದರು. ಅಥಿತಿಗಳಾಗಿ ಆಗಮಿಸಿದ್ದ ಎಂ. ಆರ್. ಉಪಾಧ್ಯಾಯ ಮಾತನಾಡಿ ಭಾರತದ ಸಂಸ್ಕೃತಿ ಬಗ್ಗೆ ವಿವರಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಊರಿನ ಮಹಿಳೆಯರು ಪೂರ್ಣಕುಂಭದ ಸ್ವಾಗತದೊಂದಿಗೆ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದರು. ಈ ಸಂದರ್ಭದಲ್ಲಿ ಊರಿನವರಾದ ಗಣೇಶ ಅಂಬಿಗ, ಯುವಾ ಬ್ರಿಗೇಡ್ ದಕ್ಷಿಣ ರಾಜ್ಯ ಸಂಚಾಲಕ ಧರ್ಮಾ ಹೊನ್ನಾರಿ, ವಿಭಾಗ ಸಂಚಾಲಕ ಅಣ್ಣಪ್ಪ ನಾಯ್ಕ , ಜಿಲ್ಲಾ ಸಂಚಾಲಕರಾದ ಸತೀಶ ಪಟಗಾರ, ಜಿಲ್ಲಾ ಸಹ ಸಂಚಾಲಕರಾದ ರಂಜೀತ್ ಸದಸ್ಯರಾದ ಸಂದೀಪ, ಚಿದಾನಂದ, ಗೌರೀಶ, ದೀಪಕ ಹೊನ್ನಾವರ ,ಅಕ್ಷಯ ಶಿರಸಿ, ಲಕ್ಷ್ಮೀಕಾಂತ, ಸಚಿನ್, ಈಶ್ವರ, ವಿನೋದ, ರವೀಶ, ಗಿರೀಶ, ಕಿರಣ ಇತರರು ಇದ್ದರು.