ಶಿರಸಿ: ನಾಡಿನ ಹೆಸರಾಂತ ಬ್ಯಾಂಕ್ ಗಳಲ್ಲಿ ಒಂದಾದ ಕರ್ಣಾಟಕ ಬ್ಯಾಂಕ್ ನೆರವಿನೊಂದಿಗೆ ಸೌರ ಶಕ್ತಿಯ ಮೂಲಕ ಸ್ವಾವಲಂಬನೆ ಸಾಧಿಸಲು ಮುಂದಾದ ಸೆಲ್ಕೋ ಸೋಲಾರ್ ಸಂಸ್ಥೆ ಹಾಗೂ ಭಾರತೀಯ ವಿಕಾಸ ಸಂಸ್ಥೆ ಸಹಕಾರದಲ್ಲಿ ರೂಪಿಸಲಾದ ಶಿಕ್ಷಣಕ್ಕಾಗಿ ಬೆಳಕು ಯೋಜನೆಯ ಕೃತಜ್ಞತಾ ಸಮಾರಂಭ ನಗರದ ಟಿಎಂಎಸ್ ಸಭಾಂಗಣದಲ್ಲಿ ಫೆ.8ರಂದು ಬೆಳಿಗ್ಗೆ 11ಕ್ಕೆ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮವನ್ನು ಕರ್ಣಾಟಕ ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕ ಮಹಾಬಲೇಶ್ವರ ಎಂ.ಎಸ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ವಹಿಸಿಕೊಳ್ಳುವರು. ಅತಿಥಿಗಳಾಗಿ ಸೆಲ್ಕೋ ಸಂಸ್ಥೆಯ ಸಿಇಓ ಮೋಹನ ಭಾಸ್ಕರ್ ಹೆಗಡೆ, ಕರ್ಣಾಟಕ ಬ್ಯಾಂಕ್ ಎಜಿಎಂ ರಾಜಗೋಪಾಲ, ಡಿಡಿಪಿಐ ಬಸವರಾಜ, ಬಿವಿಟಿಯ ಹಿರಿಯ ಸಲಹೆಗಾರ ಜಗದೀಶ ಪೈ ಪಾಲ್ಗೊಳ್ಳಲಿದ್ದಾರೆ.
ಕರ್ಣಾಟಕ ಬ್ಯಾಂಕ್ ಸಿಇಓ ಮಹಾಬಲೇಶ್ವರ ಎಂ.ಎಸ್.ಅವರ ಕನಸಾದ ಈ ಶಿಕ್ಷಣಕ್ಕಾಗಿ ಬೆಳಕು ಯೋಜನೆಯಲ್ಲಿ ಈಗಾಗಲೇ 750ಕ್ಕೂ ಅಧಿಕ ಬಡ ಪ್ರತಿಭಾವಂತ ವಿದ್ಯಾರ್ಥಿಗಳ ಕುಟುಂಬಗಳಿಗೆ ಬೆಳಕು ನೀಡಲಾಗಿದೆ.
ಕಳೆದ ಸಾಲಿನಲ್ಲಿ ಶಿರಸಿ,ಅಂಕೋಲಾ, ಸಿದ್ದಾಪುರ, ಯಲ್ಲಾಪುರ ತಾಲೂಕಿನ 10 ಫಲಾನುಭವಿಗಳಿಗೆ ಸಂಪೂರ್ಣ ಉಚಿತವಾಗಿ ಸೆಲ್ಕೋ ಬೆಳಕು ನೀಡಲಾಗಿದೆ. ಅದರ ಪ್ರಮಾಣ ಪತ್ರ ಕೂಡ ಫಲಾನುಭವಿಗಳಿಗೆ ಇದೇ ವೇಳೆ ನೀಡಲಾಗುತ್ತಿದೆ. ಕಾರ್ಯಕ್ರಮದಲ್ಲಿ ವಿಶ್ವಶಾಂತಿ ಸೇವಾ ಟ್ರಸ್ಟ್ ಸಹಕಾರ ನೀಡುತ್ತಿದೆ ಎಂದು ಸೆಲ್ಕೋದ ಉಪ ಮಹಾ ಪ್ರಬಂಧಕ ಪ್ರಸನ್ನ ಹೆಗಡೆ, ಕ್ಷೇತ್ರೀಯ ವ್ಯವಸ್ಥಾಪಕ ಮಂಜುನಾಥ ಭಾಗ್ವತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.