ಸಿದ್ದಾಪುರ: ವಿದ್ಯಾರ್ಥಿಗಳು ಕೇವಲ ಅಂಕ ಗಳಿಕೆಗೆ ಹೆಚ್ಚು ಮಹತ್ವ ಕೊಡದೇ ಶಿಸ್ತು, ತಾಳ್ಮೆ, ಸಂಯಮ, ರಾಷ್ಟ್ರ ಪ್ರೇಮದಂತಹ ವಿಚಾರಗಳಿಗೆ ಹೆಚ್ಚು ಮಹತ್ವ ನೀಡಬೇಕು. ಶಿಸ್ತಿನಿಂದ ಬದುಕನ್ನು ರೂಪಿಸಿಕೊಳ್ಳುವುದಕ್ಕೆ ಶಾಲಾ ಹಂತದಿoದಲೇ ಪ್ರಯತ್ನಿಸುವುದರ ಜೊತೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ದಂತಹ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಸಂಬoಧವನ್ನು ಹೊಂದಿರುವoತಹ ಉತ್ತಮ ಸಂಘಟನೆಗಳ ಮೂಲಕ ತಮ್ಮ ವ್ಯಕ್ತಿತ್ವ ಬೆಳವಣಿಗೆಗೆ ಶ್ರಮಿಸುವ ಕನಸು ಮತ್ತು ಗುರಿಯನ್ನು ಹೊಂದಿರಬೇಕು. ಪರೀಕ್ಷೆಗಾಗಿ ಮಾತ್ರ ಓದು ಎಂಬ ವಿಚಾರಕ್ಕಿಂತ ರಾಷ್ಟ್ರದ ಘನತೆಯನ್ನು ಎತ್ತಿ ಹಿಡಿಯುವ ಭಾವಿ ಭಾರತದ ಪ್ರಜೆಯಾಗಲು ತಮ್ಮ ಗುರಿಗಳನ್ನು ರೂಪಿಸಿಕೊಳ್ಳಬೇಕು ಎಂದು ತಾಲೂಕಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಅಧ್ಯಕ್ಷ ಹಾಗೂ ಸಾಹಿತಿ ಜಿ.ಜಿ.ಹೆಗಡೆ ಬಾಳಗೋಡ ಅವರು ಹೇಳಿದರು.
ಅವರು ಕೆನರಾ ವೆಲ್‌ಫೇರ್ ಟ್ರಸ್ಟಿನ ಬೇಡ್ಕಣಿಯ ಜನತಾ ವಿದ್ಯಾಲಯದಲ್ಲಿ ವಿದ್ಯಾರ್ಥಿಗಳಿಗಾಗಿ ಗೈಡ್ಸ್ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದರು. ಅತಿಥಿಗಳಾಗಿ ರಾಜ್ಯ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ತರಬೇತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಗಿರೀಶ ಮಾದರ ಅವರು ಮಾತನಾಡಿ ಸ್ಕೌಟ್ಸ್ ಗೈಡ್ಸ್ ನಿಯಮಗಳನ್ನು ಅರಿತು ಅದರ ವಿವಿಧ ಪರೀಕ್ಷೆಗಳನ್ನು ಉತ್ತೀರ್ಣಗೊಳಿಸಿದರೆ ಭವಿಷ್ಯದಲ್ಲಿ ಉದ್ಯೋಗಾವಕಾಶ ಪಡೆಯಲು ಶೇ. 5 ರಷ್ಟು ಅವಕಾಶ ರಾಜ್ಯ ಸರ್ಕಾರದಲ್ಲಿದೆ. ವಿದ್ಯಾರ್ಥಿಗಳು ಅದರ ಪ್ರಯೋಜನವನ್ನು ಪಡೆಯಲು ಕರೆ ನೀಡಿದರು.
ತಾಲೂಕು ಸ್ಕೌಟ್ಸ್ ಗೈಡ್ಸ್ ಸಮಿತಿಯ ಕಾರ್ಯದರ್ಶಿ ಜಿ.ಜಿ. ಹೆಗಡೆ ಮಕ್ಕಿಗದ್ದೆ ಅತಿಥಿಗಳಾಗಿ ಮಾತನಾಡಿ ವಿದ್ಯಾರ್ಥಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಶಾಲಾ ಹಂತದಲ್ಲಿ ನೈತಿಕ ಶಿಕ್ಷಣವನ್ನು, ರಾಷ್ಟ್ರ ಪ್ರೇಮವನ್ನು ರೂಪಿಸಲು ಸಹಾಯಕವಾಗುತ್ತದೆ, ತಾಳ್ಮೆ ಹಾಗೂ ಶ್ರಮ ಜೀವನದ ತತ್ತ್ವಗಳನ್ನು ಅಪಾಯದ ಸಂದರ್ಭದಲ್ಲಿ ಧೈರ್ಯದಿಂದ ಎದುರಿಸುವ ಗುಣಗಳನ್ನು ತಿಳಿಸಲು ಮತ್ತು ತರಬೇತಿ ನೀಡಲು ಭಾರತ ಸ್ಕೌಟ್ಸ್ ಗೈಡ್ಸ್ ವಿಭಾಗದಲ್ಲಿ ಅವಕಾಶವಿದೆ ಎಂದು ಹೇಳಿದರು. ತಾಲೂಕು ಘಟಕದ ಕೋಶಾಧ್ಯಕ್ಷ ಮಹೇಶ ಶೇಟ್ ಅತಿಥಿಯಾಗಿ ಮಾತನಾಡಿ ಉನ್ನತ ವ್ಯಕ್ತಿತ್ವವನ್ನು ಸಂಪಾದಿಸಿಕೊಳ್ಳಲು ಈ ಸಂಸ್ಥೆ ಹೆಚ್ಚು ನೆರವಾಗುತ್ತದೆ ಎಂದು ಹೇಳಿದರು. ಸ್ಥಳೀಯ ಜನತಾ ವಿದ್ಯಾಲಯದ ಮುಖ್ಯಶಿಕ್ಷಕಿ ಪ್ರತಿಮಾ ಪಾಲೇಕರ ಅವರು ಮಾತನಾಡಿ ತಮ್ಮ ಪ್ರೌಢಶಾಲೆಯಲ್ಲಿ ಗೈಡ್ಸ್ ವಿಭಾಗದ ಶಿಕ್ಷಣವನ್ನು, ತರಬೇತಿಯನ್ನು ನೀಡಲು ಅವಕಾಶ ದೊರಕಿದ್ದು ಒಂದು ಉಪಯುಕ್ತವಾದ ವಿಧಾನವಾಗಿದ್ದು, ತನ್ಮೂಲಕ ಶಾಲೆಯ ಸಾಂಸ್ಕೃತಿಕ ವಾತಾವರಣದ ಜತೆ ಶಿಸ್ತನ್ನು ಹೆಚ್ಚು ರೂಪಿಸಲು ನೆರವಾಗುತ್ತದೆ ಎಂದು ಹೇಳಿದರು.
ಅಧ್ಯಕ್ಷತೆಯನ್ನು ಸ್ಥಳೀಯ ಎಸ್.ಡಿ.ಎಂ.ಸಿ. ಅಧ್ಯಕ್ಷ, ಮಾಜಿ ಜಿ.ಪಂ. ಸದಸ್ಯ ವಿ.ಎನ್. ನಾಯ್ಕ ಬೇಡ್ಕಣಿ ಅವರು ವಹಿಸಿದ್ದು ಮಾತನಾಡುತ್ತಾ ಪರಸ್ಪರ ಅರಿವು, ಸಂಘಟನೆಯ ಮಹತ್ವ ಮತ್ತು ತಾಳ್ಮೆಯ ಗುಣವನ್ನು ಶಿಕ್ಷಣದ ಜೊತೆ ಕಲಿಸುವುದು ಅಗತ್ಯವಿದೆ, ವಿದ್ಯಾರ್ಥಿಗಳಲ್ಲಿ ತಮ್ಮ ತಂದೆ-ತಾಯಿಗಳ ಕುರಿತು, ಗುರುಗಳ ಕುರಿತು, ಪಾಲಕರ ಕುರಿತು ಗೌರವ ಮೂಡುವಂತಹ ಭಾವನೆ ಹಾಗೂ ಪರಿಸರದ ಕಾಳಜಿ ಬೆಳೆದು ಬರಲು ಸ್ಕೌಟ್ಸ್ ಮತ್ತು ಗೈಡ್ಸ್ ಶಿಕ್ಷಣ ಹೆಚ್ಚು ಉಪಯುಕ್ತವಾಗುತ್ತದೆ ಎಂದು ಹೇಳಿದರು.
ಗೈಡ್ಸ್ ವಿಭಾಗದ ಸಂಚಾಲಕಿ ಲತಾ ಕಾರೇಕರ ಅವರು ವಿದ್ಯಾರ್ಥಿನಿಯರಿಂದ ಗೈಡ್ಸ್ ಸಾಹಸದ ಕೆಲವು ಕೌಶಲ್ಯಗಳನ್ನು ಈ ಸಂದರ್ಭದಲ್ಲಿ ಪ್ರದರ್ಶಿಸಿದರು. ವಿದ್ಯಾರ್ಥಿನಿಯರಿಂದ ಪ್ರಾರ್ಥನೆ ನಡೆಯಿತು. ಜಿ. ಟಿ. ಭಟ್ ಶಿಕ್ಷಕರು ಸ್ವಾಗತಿಸಿದರು, ಪಿ.ಎಂ. ನಾಯ್ಕ ನಿರೂಪಿಸಿದರು. ವಿ.ಟಿ. ಗೌಡರ್ ವಂದಿಸಿದರು. ಲತಾ ಕಾರೇಕರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದರು.