Slide
Slide
Slide
previous arrow
next arrow

ಬಿಡುಗಡೆಯಾಗದ ಅನುದಾನ: ಪುರಸಭೆಯ ಸಾಮಾನ್ಯಸಭೆಯಲ್ಲಿ ಸದಸ್ಯರ ಆಕ್ರೋಶ

300x250 AD

ಕುಮಟಾ: ಸರ್ಕಾರದ ವಸತಿ ಯೋಜನೆಯಡಿ ಮಂಜೂರಾದ ಮನೆಗಳಿಗೆ ಕಳೆದ ಎರಡು ವರ್ಷಗಳಿಂದ ಹಣ ಬಿಡುಗಡೆಯಾಗದ ಕಾರಣ ಫಲಾನುಭವಿಗಳು ಸದಸ್ಯರ ವಿರುದ್ಧ ಕಿಡಿಕಾರುವಂತಾಗಿದೆ ಎಂದು ಪುರಸಭೆಯ ಸಾಮಾನ್ಯಸಭೆಯಲ್ಲಿ ಸರ್ವ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದ ಅಣ್ಣಾ ಪೈ ಸಭಾಭವನದಲ್ಲಿ ಅಧ್ಯಕ್ಷೆ ಅನುರಾಧಾ ಬಾಳೇರಿಯವರ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರಾದ ಅನಿಲ ಹರ್ಮಲಕರ್, ಮಹೇಶ ನಾಯ್ಕ ವನ್ನಳ್ಳಿ, ಎಂ.ಟಿ.ನಾಯ್ಕ ಸೇರಿದಂತೆ ಇತರ ಸದಸ್ಯರು ಮಾತನಾಡಿ, ಕಳೆದ 2 ವರ್ಷದ ಹಿಂದೆ ಮಂಜೂರಾದ ಮನೆಗಳಿಗೆ ಒಂದೇ ಒಂದು ರೂಪಾಯಿ ಬಿಡುಗಡೆಯಾಗಿಲ್ಲ. ಫಲಾನುಭವಿಗಳು ನಮ್ಮನ್ನು ಪ್ರಶ್ನಿಸುತ್ತಿದ್ದಾರೆ. ಸದ್ಯ ಮಂಜೂರಾದ ಮನೆಗಳಿಗೆ ಹಂತ ಹಂತವಾಗಿ ಹಣ ಬಿಡುಗಡೆಯಾಗುತ್ತಿದೆ. ಇದರಿಂದ ತಾರತಮ್ಯ ಮಾಡಿದ ಹಾಗೆ ಆಗುತ್ತದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಹಣ ಬಿಡುಗಡೆಯಾಗುವಂತೆ ಮುಖ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಸೂಚಿಸಿದರು.
ಪುರಸಭಾ ಮುಖ್ಯಾಧಿಕಾರಿ ಅಜಯ ಭಂಡಾರ್ಕರ್ ಪ್ರತಿಕ್ರಿಯಿಸಿ, ರಾಜೀವ್ ಗಾಂಧಿ ವಸತಿ ಯೋಜನೆಯಲ್ಲಿ 126 ಮನೆಗಳಿಗೆ 3 ಹಂತಗಳಲ್ಲಿ ಹಣ ಮಂಜೂರಿಯಾಗಬೇಕಿದೆ. ಇದರ ಕುರಿತು ಶಾಸಕ ದಿನಕರ ಶೆಟ್ಟಿ ವಸತಿ ನಿಗಮಕ್ಕೆ ಭೇಟಿ ನೀಡಿ, ಹಿರಿಯ ಅಧಿಕಾರಿಗಳ ಜತೆ ಚರ್ಚಿಸಿ, ಶೀಘ್ರದಲ್ಲಿ ಹಣ ಬಿಡುಗಡೆ ಮಾಡುವಂತೆ ತಿಳಿಸಿದ್ದಾರೆ. ಸದ್ಯದಲ್ಲೆ ಹಣ ಬಿಡುಗಡೆಯಾಗಲಿದೆ ಎಂದರು.
ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ಕಟ್ಟಡಗಳಿರುವ ಬಗ್ಗೆ ವಾರ ಪತ್ರಿಕೆಯೊಂದರಲ್ಲಿ ವರದಿ ಪ್ರಕಟಿಸಿ, ಅಧ್ಯಕ್ಷರ, ಸದಸ್ಯರ ಹಾಗೂ ಅಧಿಕಾರಿಗಳ ಮಾನ ಹರಾಜ್ ಹಾಕುತ್ತಿದ್ದಾರೆ. ಈ ಸಮಸ್ಯೆ ಕೇವಲ ಕುಮಟಾದಲ್ಲಿ ಮಾತ್ರ ಇಲ್ಲ. ಇಡೀ ದೇಶದಲ್ಲಿದೆ. ಕೆಲ ಕಾನೂನು ತೊಡಕುಗಳಿಂದ ಕೆಲ ಕಟ್ಟಡಗಳಿಗೆ ಎಲ್ಲ ಪರವಾನಗಿ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಸಮಸ್ಯೆ ಸರ್ಕಾರ ಮಟ್ಟದಲ್ಲೆ ಇತ್ಯರ್ಥವಾಗಬೇಕಿದೆ. ಆದರೆ ಸದಸ್ಯರೆ ಭ್ರಷ್ಟಾಚಾರ ಮಾಡಿದ ರೀತಿಯಲ್ಲಿ ಸುದ್ದಿ ಪ್ರಕಟಿಸಿ, ಜನರ ದೃಷ್ಟಿಯಲ್ಲಿ ನಮ್ಮನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಲಾಗುತ್ತಿದೆ ಎಂದು ಸರ್ವ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿರುವುದಲ್ಲದೇ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪುರಸಭೆ ಅಧ್ಯಕ್ಷೆ ಅನುರಾಧ ಬಾಳೇರಿ ಅವರು, ಪುರಸಭೆಯ ವಿರುದ್ಧ ಹಲವಾರು ದಿನಗಳಿಂದ ಅಪಪ್ರಚಾರ ಮಾಡುವ ರೀತಿಯಲ್ಲಿ ವಾರ ಪತ್ರಿಕೆಯೊಂದು ಬರೆಯುತ್ತಿದ್ದು, ಅಲ್ಲದೇ ನನ್ನ ವೈಯಕ್ತಿಕ ವಿಚಾರದಲ್ಲಿ ತೇಜೋವಧೆ ಮಾಡಿದ್ದಾರೆ. ಈ ಸಂಬOಧ ಸರ್ವ ಸದಸ್ಯರು ತೀರ್ಮಾನಿಸಿ, ಮಾನನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಲು ಕಾನೂನು ಸಲಹೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದರು.
ಈ ಸಂದರ್ಭದಲ್ಲಿ ಹೊಳಪು ಪಂಚಾಯತ ಹಬ್ಬ 2023ರಲ್ಲಿ ಪಥ ಸಂಚಲನದಲ್ಲಿ ಪ್ರಥಮ ಸ್ಥಾನ, ಸ್ಥಬ್ಧಚಿತ್ರ ಪ್ರದರ್ಶನದಲ್ಲಿ ದ್ವಿತೀಯ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪ್ರಥಮ, ದ್ವಿತೀಯ ಸ್ಥಾನ ಪಡೆಯಲು ತರಬೇತಿ ನೀಡಿದ ಪಟ್ಟಣದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ದೈಹಿಕ ಶಿಕ್ಷಕರಾದ ಜಯರಾಜ ಶೇರುಗಾರ ಹಾಗೂ ನಾಗರಾಜ ಭಂಡಾರಿ ಇವರನ್ನು ಸನ್ಮಾನಿಸಿ, ಗೌರವಿಸಲಾಯಿತು.
ಸಾಮಾನ್ಯ ಸಭೆಯಲ್ಲಿ ಉಪಾಧ್ಯಕ್ಷೆ ಸುಮತಿ ಭಟ್ಟ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ ಅಂಬಿಗ ಸೇರಿದಂತೆ ಸದಸ್ಯರು, ಅಧಿಕಾರಿಗಳು, ಸಿಬ್ಬಂದಿ ಇದ್ದರು.

300x250 AD
Share This
300x250 AD
300x250 AD
300x250 AD
Back to top