• Slide
    Slide
    Slide
    previous arrow
    next arrow
  • ರಾಜಕಾಲುವೆಗೆ ಹೋಟೆಲ್‌ಗಳ ಕೊಳಚೆ ನೀರು; ರೋಗ ಹರಡುವ ಭೀತಿ

    300x250 AD

    ಕುಮಟಾ: ಪಟ್ಟಣದ ರೈಲ್ವೆ ನಿಲ್ದಾಣ ರಸ್ತೆಯ ನವನಗರ ಸಮೀಪದ ರಾಜಕಾಲುವೆಗೆ ಹೋಟೆಲ್‌ಗಳ ಕೊಳಚೆ ನೀರನ್ನು ನೇರವಾಗಿ ಬಿಡುವುದರಿಂದ ದುರ್ವಾಸನೆಗೆ ಕಾರಣವಾಗಿದ್ದು, ಸ್ಥಳೀಯರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಶುರುವಾಗಿದೆ.

    ಪುರಸಭೆ ವ್ಯಾಪ್ತಿಗೆ ಬರುವ ರೈಲ್ವೆ ನಿಲ್ದಾಣ ರಸ್ತೆಯ ನವನಗರ ವಾರ್ಡ್ಗೆ ಹೊಂದಿಕೊಂಡೆ ರಾಜಕಾಲುವೆ ಇದೆ. ಈ ಕಾಲುವೆಗೆ ಆ ಭಾಗದ ಹೋಟೆಲ್‌ಗಳ ತ್ಯಾಜ್ಯಗಳ ನೀರನ್ನು ನೇರವಾಗಿ ಬಿಡುವುದರಿಂದ ರಾಜಕಾಲುವೆ ಗಬ್ಬೆದ್ದು ನಾರುವಂತಾಗಿದೆ. ರಾಜಕಾಲುವೆಯ ಕೊಳಚೆ ನೀರಿನಲ್ಲಿ ಕೋಣ, ಹಂದಿಗಳು ಮಲಗಿಕೊಂಡು ಆ ನಂತರ ಜನವಸತಿ ಪ್ರದೇಶಗಳಿಗೆ ತಿರುಗಾಡುವುದರಿಂದ ಆ ವಾರ್ಡ್ನ ನಿವಾಸಿಗಳು ಗಬ್ಬು ವಾಸನೆಯಿಂದ ನರಕಯಾತನೆ ಅನುಭವಿಸುವಂತಾಗಿದೆ. ನವನಗರ ಜನವಸತಿ ಪ್ರದೇಶ ಪುರಸಭೆಯ ನಿರ್ಲಕ್ಷ್ಯಕ್ಕೆ ಗುರಿಯಾಗಿದ್ದು, ಕೊಳಚೆ ನೀರಿನಿಂದ ಶುದ್ಧ ನೀರು, ಗಾಳಿ ಸಿಗದೇ ಪರದಾಡುವಂತಾಗಿದೆ. ಅಲ್ಲಿನ ವಾತಾವರಣ ಕಲುಷಿತಗೊಳ್ಳುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಆತಂಕ ಸ್ಥಳೀಯರನ್ನು ಕಾಡುವಂತಾಗಿದೆ. ಗಲೀಜಿನಿಂದ ಸೊಳ್ಳೆಗಳ ಕಾಟ ವಿಪರೀತವಾಗಿದ್ದು, ಸಂಜೆಯ ಸಮಯದಲ್ಲಿ ಸೊಳ್ಳೆಗಳ ಕಾಟದಿಂದ ಅಲ್ಲಿನ ಜನರು ಹೈರಾಣರಾಗಿದ್ದಾರೆ. ಈ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಕಾರ್ಯಕ್ರಮದಲ್ಲೊಂದಾದ ಸ್ವಚ್ಛ ಭಾರತ್ ಕಾರ್ಯಕ್ರಮ ಹಳ್ಳಹಿಡಿಯುವಂತಾಗಿದೆ.

    ಹೊಟೆಲ್ ಆರಂಭಿಸುವ ಪೂರ್ವದಲ್ಲಿ ಕೊಳಚೆ ನೀರನ್ನು ರಾಜಕಾಲುವೆಗೆ ಬಿಡಬಾರದು. ಡ್ರೈನೆಜ್ ಮಾಡಿಕೊಳ್ಳಬೇಕು ಎಂಬ ನಿಯಮವಿದ್ದರೂ ಅದನ್ನು ಗಾಳಿಗೆ ತೂರಿ, ತೆರೆದ ರಾಜಕಾಲುವೆಗೆ ಗಲೀಜು ನೀರನ್ನು ನೇರವಾಗಿ ಬಿಡಲಾಗಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ಗಬ್ಬೆದ್ದು, ನಾರುತ್ತಿದೆ. ಕೊಳಚೆ ನೀರನ್ನು ಗಟಾರಕ್ಕೆ ಹರಿಬಿಟ್ಟರೆ ದಂಡ ವಿಧಿಸಿ, ಕಾನೂನು ಕ್ರಮ ಕೈಗೊಳ್ಳುವ ಪುರಸಭಾ ಅಧಿಕಾರಿಗಳು ಜಾಣ ಕುರುಡರಂತೆ ವರ್ತಿಸುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಈ ಬಗ್ಗೆ ಸ್ಥಳೀಯರು ಪುರಸಭೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷಿಸಿದ್ದಾರೆ ಎಂಬುದು ಸ್ಥಳೀಯ ನಿವಾಸಿಗಳಾದ ನಿವೃತ್ತ ಶಿಕ್ಷಕ ಬಿ.ಡಿ.ನಾಯಕ, ನಿವೃತ್ತ ಅಂಚೆಕಚೇರಿ ಗುಮಾಸ್ತ ಜಿ.ಎಸ್.ಶೆಟ್ಟಿ, ಆರ್.ಎಸ್.ನಾಯಕ, ರವಿ ನಾಯ್ಕ, ಮುರಳೀಧರ ಭಟ್, ನಾರಾಯಣ ಭಟ್ಟ, ಸ್ವರೂಪ ನಾಯಕ ಆರೋಪವಾಗಿದೆ.

    300x250 AD

    ಇನ್ಮುಂದಾದರೂ ಕುಮಟಾ ಪುರಸಭೆ ರಾಜಕಾಲುವೆಗೆ ನೇರವಾಗಿ ಕೊಳಚೆ ನೀರುಗಳನ್ನು ಬಿಡುವ ಹೋಟೆಲ್‌ಗಳಿಗೆ ಖಡಕ್ ಎಚ್ಚರಿಕೆ ನೀಡುವ ಮೂಲಕ ನವನಗರದ ನಾಗರಿಕರಿಗಾಗುವ ತೊಂದರೆಯನ್ನು ನಿವಾರಿಸುತ್ತದೆಯೋ ಅಥವಾ ಅಲ್ಲಿನ ಜನರು ಹೋರಾಟದ ಮೂಲಕವೇ ಪುರಸಭೆಗೆ ಚುರುಕು ಮುಟ್ಟಿಸಬೇಕಾಗಿದೆಯೋ ಕಾದು ನೋಡಬೇಕಿದೆ.

    Share This
    300x250 AD
    300x250 AD
    300x250 AD
    Leaderboard Ad
    Back to top