ಭಟ್ಕಳ: ತಾಲೂಕ ಅರಣ್ಯ ಅತಿಕ್ರಮಣದಾರ ಸಭೆಯನ್ನ ಭಟ್ಕಳದ ಪ್ರವಾಸಿ ಮಂದಿರದಲ್ಲಿ(ಐಬಿ) ಜನವರಿ 29, ರವಿವಾರದಂದು ಮುಂಜಾನೆ 10 ಗಂಟೆಗೆ ಸಂಘಟಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರಣ್ಯ ಸಿಬ್ಬಂದಿಗಳ ದೌರ್ಜನ್ಯ, ಅಸಮರ್ಪಕ ಜಿಪಿಎಸ್ ಮೇಲ್ಮನವಿ ಕುರಿತು ಮಾಹಿತಿ, ಫೇಬ್ರವರಿಯಲ್ಲಿ ಬೆಂಗಳೂರಿನಲ್ಲಿ ಜರುಗುವ ಬಜೆಟ್ ಅಧಿವೇಶನದಲ್ಲಿ ಬೆಂಗಳೂರು ಚಲೋ ಹಮ್ಮಿಕೊಳ್ಳುವ ಹಾಗೂ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅರಣ್ಯವಾಸಿಯ ಅನುಭೋಗದ ಕ್ಷೇತ್ರಕ್ಕೆ ಆತಂಕ ಪಡಿಸುವುದಿಲ್ಲ ಎಂಬ ಅರಣ್ಯ ಸಂರಕ್ಷಣಾಧಿಕಾರಿ ನೀಡಿದ ಲಿಖಿತ ಪತ್ರದ ಕುರಿತು, ಅಸಮರ್ಪಕ ಜಿಪಿಎಸ್ ರಶೀದಿ ಹಿಂತಿರುಗಿಸುವ ಹಾಗೂ ಗುರುತಿನ ಪತ್ರ ವಿತರಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಟ್ಕಳ ತಾಲೂಕಿನ ಅರಣ್ಯ ಅತಿಕ್ರಮಣದಾರರು ಸಭೆಯಲ್ಲಿ ಭಾಗವಹಿಸಲು ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.