ಹೊನ್ನಾವರ: ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಉತ್ತಮವಾದ ಶೈಕ್ಷಣಿಕ ಸೇವೆ ಒದಗಿಸುವ ಮೂಲಕ ಕೊಳಗದ್ದೆಯ ಶ್ರೀಸಿದ್ದಿವಿನಾಯಕ ವಿವಿದೊದ್ದೇಶ ವಿದ್ಯಾ ಪ್ರಸಾರಕ ಸಂಸ್ಥೆಯು ಶೈಕ್ಷಣಿಕ ರಂಗಕ್ಕೆ ಉತ್ತಮವಾದ ಕೊಡುಗೆ ನೀಡುತ್ತಿದೆ ಎಂದು ಶಾಸಕ ಸುನೀಲ್ ನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ಖರ್ವಾ ಕೊಳಗದ್ದೆಯ ಶ್ರೀ ಸಿದ್ದಿವಿನಾಯಕ ವಿವಿದೋದ್ದೇಶ ವಿದ್ಯಾ ಪ್ರಸಾರಕ ಮಂಡಳಿಯಿoದ ಶ್ರೀ ಸಿದ್ದಿವಿನಾಯಕ ಶಾಲಾ ಆವಾರದಲ್ಲಿ ನಡೆದ ಸಮೂಹ ಸಂಸ್ಥೆಗಳ ‘ಪ್ರತಿಭೋತ್ಸವ’ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಕ್ಕಳಿಗೆ ಉತ್ತಮವಾಗಿರುವ ಶಿಕ್ಷಣದ ಜೊತೆಗೆ ಸಂಸ್ಕಾರ ನೀಡಿ. ಆಗ ಮಾತ್ರ ಸಾಧನೆ ಮಾಡಲು ಸಾಧ್ಯ. ಸಾಧನೆ ಯಾರೊಬ್ಬರ ಸ್ವತ್ತಲ್ಲ, ವಿದ್ಯಾರ್ಥಿಗಳು ಸಾಧನೆಯ ಮೆಟ್ಟಿಲನ್ನ ಹತ್ತಿ ಹೋಗಬೇಕು.ಸಾಧನೆಯ ಮಾರ್ಗದಲ್ಲಿ ಅನೇಕ ಕವಲುದಾರಿಗಳಿವೆ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರಾಮಚಂದ್ರ ಭಟ್ಟ ಮಾತನಾಡಿ, ಅತ್ಯಂತ ಕಡಿಮೆ ಶುಲ್ಕದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ನೀಡುತ್ತಿರುವ ಹೆಮ್ಮೆ ನಮಗಿದೆ.ಸುತ್ತಮುತ್ತಲಿನ ಗ್ರಾಮದ ಜನರ ಸಹಕಾರ ಹೆಚ್ಚಿನದಾಗಿದೆ. ಮುಂದೆಯೂ ಇದೇ ರೀತಿ ಸಹಕಾರ ನೀಡಿ ಎಂದರು.
ಸoಸ್ಥೆಗೆ 20 ಕಂಪ್ಯೂಟರ್ ಕೊಡುಗೆಯಾಗಿ ನೀಡಿದ ಸೀನಿಯರ್ ಟೆಕ್ನಿಕಲ್ ಅನಾಲಿಸ್ಟ್ ಗಜಾನನ ಹೆಗಡೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷೆ ಉಷಾ ಶಾಸ್ತ್ರಿ, ಕಾರ್ಯದರ್ಶಿ ಎಸ್.ಎನ್.ನಾಯ್ಕ, ಕೃಷ್ಣಮೂರ್ತಿ ಭಟ್ಟ ಶಿವಾನಿ, ಬಿಆರ್‌ಸಿ ಪ್ರಮೋದ್ ನಾಯ್ಕ, ಪ್ರೌಢಶಾಲಾ ವಿಭಾಗದ ಮುಖ್ಯಾಧ್ಯಾಪಕ ಎಸ್.ಎಲ್.ನಾಯ್ಕ, ವಿದ್ಯಾಮಂದಿರ ಆಂಗ್ಲ ವಿಭಾಗದ ಮುಖ್ಯಾಧ್ಯಾಪಕ ಪಿ.ಜಿ.ಹೆಗಡೆ, ಶಿಕ್ಷಕ ರಮೇಶ್ ನಾಯ್ಕ ಉಪಸ್ಥಿತರಿದ್ದರು. ನಂತರ ಶಾಲಾ ವಿದ್ಯಾರ್ಥಿಗಳಿಂದ ನಡೆದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜನಮನಸೂರೆಗೊಂಡಿತು.