ಜೊಯಿಡಾ: ತಾಲೂಕಿನ ಡಿಗ್ಗಿ ಗ್ರಾಮಕ್ಕೆ ನೂತನ ಬಸ್ ಹಾಗೂ 15 ಲಕ್ಷ ಅನುದಾನದಲ್ಲಿ ಡೇರಿಯಾದಿಂದ ತೇರಾಳಿವರಗೆ ರಸ್ತೆ ಸುಧಾರಣೆ ಕಾಮಗಾರಿಗಳಿಗೆ ಶಾಸಕ ಆರ್.ವಿ.ದೇಶಪಾಂಡೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಡಿಗ್ಗಿ ಗ್ರಾಮದ ಜನರ ಬಹಳಷ್ಟು ವರ್ಷಗಳ ಬೇಡಿಕೆ ಈಗ ಈಡೇರಿದೆ; ಇದು ಸಂತಸದ ಸಂಗತಿ. ಹಳ್ಳಿಗಾಡಿನ ಶಾಲಾ ಮಕ್ಕಳಿಗೆ, ವೃದ್ಧರಿಗೆ, ಎಲ್ಲಾ ಸಾರ್ವಜನಿಕರಿಗೆ ಬಸ್ ವ್ಯವಸ್ಥೆಯಿಂದ ಅನುಕೂಲವಾಗಲಿ ಎಂದರು.
ಈ ಸಂದರ್ಭದಲ್ಲಿ ನೂತನ ಬ್ಲಾಕ್ ಅಧ್ಯಕ್ಷ ವಿನಯ ದೇಸಾಯಿ, ಜಿ.ಪಂ. ಮಾಜಿ ಸದಸ್ಯ ರಮೇಶ ನಾಯ್ಕ, ಕಾಂಗ್ರೆಸ್‌ನ ಸದಾನಂದ ದಬ್ಗಾರ, ಕಾತೇಲಿ ಗ್ರಾ.ಪಂ. ಅಧ್ಯಕ್ಷೆ ವಿಜಯಲಕ್ಷಿ ಡೇರೇಕರ್, ಮಂಗೇಶ ಕಾಮತ್, ದತ್ತಾ ನಾಯ್ಕ, ದಿಗಂಬರ ದೇಸಾಯಿ, ರತ್ನಾಕರ ದೇಸಾಯಿ, ಕುಣಬಿ ಸಮಾಜದ ಜಿಲ್ಲಾಧ್ಯಕ್ಷ ಸುಭಾಷ ಗಾವಡಾ, ಅಜಿತ್ ಮಿರಾಶಿ ಇತರರು ಇದ್ದರು.
ರಸ್ತಾ ರೋಖೋಗೆ ಸಿಕ್ಕ ಸ್ಪಂದನೆ
ಡಿಗ್ಗಿ, ಬಜಾರಕುಣುಂಗ, ತೇರಾಳಿ ಸೇರಿದಂತೆ ಇನ್ನಿತರ ಗ್ರಾಮದ ಜನರು ತಮ್ಮ ಗ್ರಾಮಕ್ಕೆ ಬಸ್ ಬಿಡಬೇಕೆಂದು ಆಗ್ರಹಿಸಿ ಕೆಲ ದಿನಗಳ ಹಿಂದೆ ಸದಾಶಿವಗಡ- ಔರಾದ್ ಮುಖ್ಯ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿನ್ನೆಲೆಯಲ್ಲಿ ನೂತನ ಬಸ್ ಪ್ರಾರಂಭವಾಗಿರುವುದು ಸ್ಥಳೀಯ ಜನರಿಗೆ ಅನುಕೂಲವಾಗಿದೆ.