ಶಿರಸಿ: ಸಮಾಜದಲ್ಲಿ ಆದರ್ಶವಂತರಾಗಿ ಬದುಕುವವರ ಸಂಖ್ಯೆ ಇಂದು ಬಹು ವಿರಳ ಎಂದು ಹಿರಿಯ ವಿದ್ವಾಂಸ ಅಗ್ಗೆರೆ ಗಂಗಾಧರ ಭಟ್ಟ ನುಡಿದರು.
ರೇವಣಕಟ್ಟಾದಲ್ಲಿ ನಡೆದ ಕೀರ್ತಿಶೇಷ ವಿದ್ವಾನ್ ರಾಮಚಂದ್ರ ಭಟ್ ಕೊಡೆಗದ್ದೆ ಇವರ ಸಂಸ್ಮರಣ ಕಾರ್ಯಕ್ರಮದಲ್ಲಿ ‘ರಾಮಗುಣಪ್ರಭಾ’ ಎಂಬ ಸಂಸ್ಮರಣ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದರು.
ಇಂದು ಮೌಲ್ಯಗಳು ಕುಸಿಯುತ್ತಿವೆ. ಸಂಬಂಧಗಳು ಶಿಥಿಲವಾಗುತ್ತಿವೆ. ಗುರು-ಶಿಷ್ಯರ ಸಂಬಂಧ ದೂರವಾಗುತ್ತಿದೆ. ಆದರೂ ಉತ್ತಮ ಜೀವನ ನಡೆಸಿದ ಸಮಾಜದ ಋಣ ತೀರಿಸಿದ ಗುಣವಂತರನ್ನು ಜೀವಂತರನ್ನಾಗಿಸುವ ಅನಿವಾರ್ಯತೆ ಇಂದಿದೆ ಎಂದರು.
ಗುಣವಂತರ ಆ ಸದ್ಗುಣಗಳ ಗುರುತನ್ನು ಸ್ಥಿರವಾಗಿಸುವ ಅಗತ್ಯತೆ ಇಂದು ಸಮಾಜಕ್ಕಿದೆ. ಜೀವನದ ಕತ್ತಲೆಯನ್ನು ದೂರ ಮಾಡಿಕೊಳ್ಳಲು ಗುರುವು ನೀಡಿದ ವಿದ್ಯೆ ಉಪದೇಶದ ಬೆಳಕು ನಮಗೆ ಸಹಾಯಕ್ಕೆ ಸದಾ ಬರುತ್ತದೆ. ಬಹುಮುಖ ಪ್ರತಿಭೆಯ ಜೊತೆ ಹಿತಮಿತವಾಗಿ ಬದುಕಿದ ಸಮಾಜ ಅನುಸರಿಸಲು ಯೋಗ್ಯರಾದವರು ರಾಮಚಂದ್ರ ಭಟ್ಟರು ಎಂದು ಬಣ್ಣಿಸಿದರು.
ಯಕ್ಷಗಾನ ಕಲಾವಿದ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿ, ನಾವು ಹಿರಿಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಜೀವನದಲ್ಲಿ ನಾವು ಎತ್ತರವಾಗಿ ಬದುಕಿದಲ್ಲಿ ಎಲ್ಲರೂ ಅದನ್ನು ಅನುಸರಿಸುತ್ತಾರೆ. ಸಾಂಸ್ಕೃತಿಕ ಮೌಲ್ಯಗಳನ್ನು ಗೌರವಿಸಿ ಬದುಕಿದವರು ರಾಮಚಂದ್ರ ಭಟ್ಟರು ಎಂದರು.
ಸಭೆಯ ಅಧ್ಯಕ್ಷತೆಯನ್ನು ಗೀರ್ವಾಣ ವಿದ್ಯಾ ಸಂಸ್ಥೆಯ ಅಧ್ಯಕ್ಷ ಗಣಪತಿ ಭಟ್ಟ ಕೊಪ್ಪಲ ತೋಟ ವಹಿಸಿದ್ದರು. ಕರೂರು ಸೀಮಾ ಅಧ್ಯಕ್ಷ ಉಮಾಪತಿ ಭಟ್ಟ ಮತ್ತು ರೇವಣಕಟ್ಟ ಸಿದ್ಧಿ ವಿನಾಯಕ ದೇವಸ್ಥಾನದ ಮೊಕ್ತೇಸರ ವಸಂತ ಹೆಗಡೆ ಸಿರೀಕುಳಿ, ಸುಬ್ರಾಯ ಭಟ್ಟ ಕೊಡೆಗದ್ದೆ ಸಭೆಯಲ್ಲಿ ಉಪಸ್ಥಿತರಿದ್ದರು.
ಡಾ.ವಿನಾಯಕ ಭಟ್ ಕೊಡೆಗದ್ದೆ ನಿರೂಪಿಸಿದರು. ನಾರಾಯಣ ಭಟ್ಟ ಬಳ್ಳಿ ಸ್ವಾಗತಿಸಿದರು. ಡಾ. ಶ್ರೀಕೃಷ್ಣ ಭಟ್ಟ ಗ್ರಂಥ ಪರಿಚಯ ಮಾಡಿದರು. ವಿದ್ವಾನ್ ಗಜಾನನ ಭಟ್ಟ ರೇವಣಕಟ್ಟ ವಂದಿಸಿದರು.
ಬಳಿಕ ‘ಶ್ರೀರಾಮ ನಿರ್ಯಾಣ’ ಯಕ್ಷಗಾನ ತಾಳಮದ್ದಲೆ ನಡೆಯಿತು.