Slide
Slide
Slide
previous arrow
next arrow

ಕನ್ನಡ ಶಾಲೆಗಳನ್ನು ದತ್ತು ಪಡೆದು ಅಭಿವೃದ್ಧಿಪಡಿಸಿ: ಮಾಲತಿ ಪಟ್ಟಣಶೆಟ್ಟಿ

300x250 AD

ಅಂಕೋಲಾ: ಕನ್ನಡ ಶಾಲೆಗಳು ಮುಚ್ಚಬಾರದು. ವರ್ಷಕ್ಕೆ ಒಂದು ಶಾಲೆಯನ್ನಾದರೂ ದತ್ತು ತೆಗೆದುಕೊಂಡು ಸರಕಾರಿ ಶಾಲೆಯತ್ತ ಮಕ್ಕಳನ್ನು ಆಕರ್ಷಿಸುವಂತೆ ಮಾಡಬೇಕು ಎಂದು ಹಿರಿಯ ಸಾಹಿತಿ ಧಾರವಾಡದ ಮಾಲತಿ ಪಟ್ಟಣಶೆಟ್ಟಿ ಹೇಳಿದರು.
ಅವರು ಪಟ್ಟಣದ ನಾಡವರ ಸಭಾಭವನದಲ್ಲಿ ನಡೆದ ತಾಲೂಕಿನ 9ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿ, ಸಾಹಿತ್ಯ ಘಟಕಗಳು ಕ್ರಿಯಾಶೀಲ ಮತ್ತು ಪ್ರಯೋಗಶೀಲವಾಗಿರಬೇಕು. ಹೊಸಬರಿಗೆ ಅವಕಾಶ ನೀಡಿ ಹೊಸತನದ ಆವಿಷ್ಕಾರಗಳು ನಡೆಯಬೇಕು. ಹೊಸತನವನ್ನು ಸ್ವೀಕರಿಸಿದಾಗ ಬದುಕೂ ಸಾರ್ಥಕವಾಗುತ್ತದೆ. ಮುಂದಿನ ದಿನಗಳಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ, ಮಕ್ಕಳ ಸಾಹಿತ್ಯ ಸಮ್ಮೇಳನ, ಶಿಕ್ಷಕ ಸಾಹಿತ್ಯ ಸಮ್ಮೇಳನ, ಮತ್ತು ಯುವ ಸಾಹಿತ್ಯ ಸಮ್ಮೇಳನಗಳು ನಡೆಯಬೇಕು.
ಸಮ್ಮೇಳನಾಧ್ಯಕ್ಷರಾಗಿ ಮಹಿಳಾ ಸಾಹಿತಿಯನ್ನು ಆಯ್ಕೆ ಮಾಡಿರುವದು ಸ್ವಾಗತಾರ್ಹ. ಇಂದಿನ ದಿನಗಳಲ್ಲಿ ಮಹಿಳೆಯರಿಗೆ ಎಲ್ಲ ಕ್ಷೇತ್ರಗಳಲ್ಲಿ ಪ್ರಧಾನ್ಯತೆ ಸಿಗುತ್ತಿದೆ ಎನ್ನುವದಕ್ಕೆ ಕವಿಗೋಷ್ಠಿಯಲ್ಲಿ ಅರ್ಧಕ್ಕಿಂತ ಹೆಚ್ಚು ಮಹಿಳೆಯರು ಭಾಗವಹಿಸಿರುವುದೇ ಸಾಕ್ಷಿ ಎಂದರು. ಕಸಾಪ ಜಿಲ್ಲಾ ಮಟ್ಟದಲ್ಲಿ ಸ್ವಂತ ಕಟ್ಟಡದ ವ್ಯವಸ್ಥೆಯನ್ನು ಸರಕಾರ ಮಾಡಬೇಕು ಎಂದರು.
ಸಮ್ಮೇಳನದ ಅಧ್ಯಕ್ಷೆ ಹೊನ್ನಮ್ಮ ನಾಯಕ ಮಾತನಾಡಿ ಅಂಕೋಲೆ ಎನ್ನುವದು ವೈವಿದ್ಯಮಯ ಭಾಷೆ ಮತ್ತು ಸಂಸ್ಕೃತಿಗೆ ಪ್ರಸಿದ್ಧವಾಗಿದೆ. ಸಾಹಿತಿಗಳ ಸಂಖ್ಯೆಯೂ ಗಣನೀಯವಾಗಿ ಹೆಚ್ಚಾಗುತ್ತಿದೆ. ತಾಲೂಕಿನ ಅನೇಕ ಪ್ರತಿಭೆಗಳು ದೇಶ ವಿದೇಶಗಳಲ್ಲಿ ಮಿಂಚುತ್ತಿವೆ. ನಾವು ನಮ್ಮ ಪೂರ್ವಜರ ಹಾಡು ಸಾಹಿತ್ಯಗಳನ್ನು ಮರೆಯಬಾರದು. ಅವರ ಕೃತಿಗಳಲ್ಲಿ ಜೀವನದ ಮೌಲ್ಯಗಳಿರುತ್ತವೆ ಎಂದರು.
ಕಸಾಪ ತಾಲೂಕಾಧ್ಯಕ್ಷ ಗೋಪಾಲಕೃಷ್ಣ ನಾಯಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು. ಪುರಸಭೆಯ ಅಧ್ಯಕ್ಷೆ ಶಾಂತಲಾ ನಾಡಕರ್ಣಿ, ಪುರಸಭೆಯ ಮುಖ್ಯಾಧಿಕಾರಿ ಎನ್ ಎಮ್ ಮೆಸ್ತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ ಮಾತನಾಡಿದರು.
ತಾ.ಪಂ. ಇಓ ಪಿ.ವೈ.ಸಾವಂತ, ಪದ್ಮಶ್ರೀ ಸುಕ್ರೀ ಗೌಡ, ಹಿರಿಯ ಸಾಹಿತಿ ವಿಷ್ಣು ನಾಯ್ಕ, ಶಾಂತಾರಾಮ ನಾಯಕ, ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆ, ಪುರಸಭೆಯ ಉಪಾಧ್ಯಕ್ಷೆ ರೇಖಾ ಗಾಂವಕರ, ಪ್ರೊ.ಮೋಹನ ಹಬ್ಬು, ಡಾ.ಆರ್.ಜಿ.ಗುಂದಿ, ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿ ಸವಿತಾ ಶಾಸ್ತ್ರಿಮಠ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜಗದೀಶ ನಾಯಕ ಹೊಸ್ಕೇರಿ, ಸರಕಾರಿ ನೌಕರರ ಸಂಘದ ಅಧ್ಯಕ್ಷ ಬಾಲಚಂದ್ರ ನಾಯಕ, ಮೋಹನ ನಾಯಕ, ಜಿಲ್ಲಾ ಸಮಿತಿಯ ಕಾರ್ಯದರ್ಶಿ ಪಿ.ಆರ್.ನಾಯ್ಕ ಉಪಸ್ಥಿತರಿದ್ದರು.
ನಿಕಟಪೂರ್ವ ಅಧ್ಯಕ್ಷ ನಾಗೇಂದ್ರ ನಾಯಕ ತೊರ್ಕೆ ಧ್ವಜವನ್ನು ಸಮ್ಮೇಳನಾಧ್ಯಕ್ಷರಿಗೆ ಹಸ್ತಾಂತರಿಸಿದರು. ರಾಜೇಶ ನಾಯಕ ನಿರೂಪಿಸಿದರು. ಜಗದೀಶ ನಾಯಕ ಹೊಸ್ಕೇರಿ ವಂದಿಸಿದರು.

300x250 AD
Share This
300x250 AD
300x250 AD
300x250 AD
Back to top