ಭಟ್ಕಳ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಹೆಬಳೆ ವಲಯ ಹಾಗೂ ಜಾಲಿ ಸರಕಾರಿ ಪ್ರೌಢಶಾಲೆ ಸಹಯೋಗದಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.
ಸತ್ಯಸಾಯಿ ಸಮಿತಿಯ ಸಂಪನ್ಮೂಲ ವ್ಯಕ್ತಿ ಭಾಸ್ಕರ ನಾಯ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ, ದುಶ್ಚಟ ಮುಕ್ತ ಸಮಾಜ ನಿರ್ಮಾಣದಲ್ಲಿ ಯುವಪೀಳಿಗೆಯ ಪಾತ್ರ ಮತ್ತು ಶಿಕ್ಷಣದ ಮಹತ್ವದ ಬಗ್ಗೆ ಅರಿವು ಮೂಡಿಸಿದರು. ತಂದೆತಾಯಿ, ಗುರುಹಿರಿಯರನ್ನು ಗೌರವದಿಂದ ನೋಡಿಕೊಳ್ಳುವ ಬಗ್ಗೆ ಒತ್ತಿ ಹೇಳಿದರು. ಭಗವದ್ಗೀತೆಯ ಸಾರ ಹಾಗೂ ಸ್ವಾಮಿ ವಿವೇಕಾನಂದರ ತತ್ವಾದರ್ಶಗಳ ಬಗ್ಗೆ ತಿಳಿಸುತ್ತಾ, ಸ್ವಾಸ್ಥ್ಯ ಸಮಾಜ ಕಟ್ಟುವಲ್ಲಿ ಮಕ್ಕಳ ಪಾತ್ರ ಹೇಗಿರಬೇಕು ಎನ್ನುವುದರ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಸಾಹಿತಿ ಹಾಗೂ ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರ್ವಹಿಸಿದರೆ, ಹೆಬಳೆ ವಲಯದ ಮೇಲ್ವಿಚಾರಕಿ ಸುಶೀಲಾ ಸ್ವಾಗತಿಸಿದರು. ಸೇವಾ ಪ್ರತಿನಿಧಿ ಸುಶೀಲಾ ಮೊಗೇರ ವಂದಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯಶಿಕ್ಷಕಿ ಶಾರದಾ ನಾಯ್ಕ ವಹಿಸಿದ್ದರು. ಸಹಶಿಕ್ಷಕರಾದ ರೇಣುಕಾ ನಾಯಕ್, ಮೋಹಿನಿ ಬಾನಾವಳಿಕರ್, ಜಯಂತಿ ನಾಯಕ್, ಶೋಭಾ ಗೌಡ ಹಾಗೂ ತಿಮ್ಮಪ್ಪ ದೇವಾಡಿಗ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.