ಹಳಿಯಾಳ: ಇಲ್ಲಿನ ಕೆಎಲ್‌ಎಸ್ ಪದವಿಪೂರ್ವ ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುಗೆ ಕಾರ್ಯಕ್ರಮ ‘ಸಾಧನಾ- 2023’ ಅದ್ಧೂರಿಯಾಗಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಬೆಳಗಾವಿಯ ಕೆಎಲ್‌ಎಸ್ ಜಿಐಟಿ ಪ್ರಾಚಾರ್ಯ ಡಾ.ಜಯಂತ ಕೆ.ಕಿತ್ತೂರ, ಇಂದಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಜಗತ್ತೇ ಮುಷ್ಟಿಯಲ್ಲಿದೆ ಎಂಬುದು ಸತ್ಯ. ಆದರೂ ಬಳಸುವ ಮಾರ್ಗ ಉತ್ತಮವಾಗಿರಬೇಕು. ಸಾಧಕರನ್ನು ನೋಡಿ ಪ್ರೇರಣೆ ಪಡೆಯಬೇಕು. ವಿದ್ಯಾರ್ಥಿಗಳು ಕಾರ್ಯಪ್ರವೃತ್ತರಾದಾಗ ಮಾತ್ರ ಉಜ್ವಲ ಭವಿಷ್ಯ ಸಾಧ್ಯವೆಂದು ಹೇಳಿದರು.
ಕಾಲೇಜು ಪ್ರಾಚಾರ್ಯ ಡಾ.ಎಸ್.ಎಮ್.ಗಲಿಗಲಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ವಿದ್ಯಾರ್ಥಿಗಳು ಕೌಶಲ್ಯಪರ ಶಿಕ್ಷಣಕ್ಕೆ ಮಹತ್ವ ನೀಡಬೇಕು. ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿ ಯಶಸ್ಸು ಸಾಧಿಸಿ ಎಂದು ಶುಭ ಹಾರೈಸಿದರು.
ಕಬ್ಬಡಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಖೇಮು ಹುಂಬೆ ಹಾಗೂ ಚಿಗುರು ಪುಸ್ತಕ ಬರೆದ ಸಾಕ್ಷಿ ಸಾಮಂತ ಅವರನ್ನು ಸನ್ಮಾನಿಸಲಾಯಿತು. ಶೈಕ್ಷಣಿಕ ಸಂಯೋಜಕ ಶ್ರೀನಿವಾಸ ಪ್ರಭುರವರು ಸ್ವಾಗತಿಸಿದರು. ಉಪನ್ಯಾಸಕ ಶಾಂತಾರಾಮ ಚಿಬ್ಬುಲಕರ ವಾರ್ಷಿಕ ವರದಿ ವಾಚಿಸಿದರು. ಗೌರಿ ಪಾಟೀಲ ವಂದಿಸಿದರು. ಸ್ತುತಿ ಭಟ್ ಹಾಗೂ ಹರ್ಶಿಯಾ ದುಕಾನದಾರ ಕಾರ್ಯಕ್ರಮ ನಿರೂಪಿಸಿದರು. ಸಾಂಸ್ಕೃತಿಕ ಹಾಗೂ ಕ್ರೀಡಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.