ಭಟ್ಕಳ: ಮೀನುಗಾರಿಕಾ ಇಲಾಖೆ, ಮೂಲ ಸೌಲಭ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯಡಿಯಲ್ಲಿ ತಾಲೂಕಿನ ಬಂದರ್ ಮಾವಿನಕುರ್ವೆಯಲ್ಲಿ 5 ಕೋಟಿ ರೂ. ವೆಚ್ಚದ ಅನುದಾನದಲ್ಲಿ ಡ್ರಜ್ಜಿಂಗ್ ಕಾಮಗಾರಿಗೆ ಶಾಸಕ ಸುನೀಲ ನಾಯ್ಕ ಶಿಲಾನ್ಯಾಸ ನೆರವೇರಿಸಿದರು.
ನಂತರ ಮಾತನಾಡಿದ ಅವರು, 15 ವರ್ಷಗಳ ಕಾಲ ಇದೇ ಬಂದರನಲ್ಲಿ ಉದ್ಯಮ ಮಾಡಿರುವ ನನಗೆ ಇಲ್ಲಿನ ಸಮಸ್ಯೆಯ ಅರಿವಿದೆ. ಬಹುವರ್ಷದ ಬೇಡಿಕೆಯನ್ನು ನನ್ನ ಅವಧಿಯಲ್ಲಿ ಸರಕಾರದ ಮಟ್ಟದಲ್ಲಿ ಪ್ರಯತ್ನಿಸಿದ್ದೇನೆ. ಇದಕ್ಕೆ ಈ ಊರಿನ ಮೀನುಗಾರರ ಮುಖಂಡರು ಹಾಗೂ ಯುವಕರ ಶ್ರಮವು ಸಹ ಇದೆ. ಅವರೇ ಈ ಕಾಮಗಾರಿಯ ಮೂಲಕರ್ತರಾಗಿದ್ದಾರೆ. ಇದೇ ವೇಳೆ ಇಲ್ಲಿನ ಡ್ರಜ್ಜಿಂಗ್ ಕಾಮಗಾರಿಯ ವಿಷಯವಾಗಿ ಮುಖ್ಯಮಂತ್ರಿಯ ಭೇಟಿಗೆ ಹಠ ತೊಟ್ಟ ಇಲ್ಲಿನ ಗ್ರಾಮಸ್ಥರನ್ನು ಮುಖ್ಯಮಂತ್ರಿ ಅವರಲ್ಲಿ ಭೇಟಿ ಮಾಡಿಸಿ, ಕಾಮಗಾರಿಗೆ ಸರಕಾರ ಅನುಮತಿ ನೀಡದೇ ಇದ್ದಲ್ಲಿ ರಾಜೀನಾಮೆ ನೀಡಲಿದ್ದೇನೆ ಎಂದು ಸ್ಪಷ್ಟವಾಗಿ ತಿಳಿಸಿದ್ದೆ. ತದನಂತರ ಇಷ್ಟು ವಿಳಂಬ ಕಾರಣ ಏನೆಂದರೆ ಕಾಮಗಾರಿಯನ್ನು ಕಾಟಾಚಾರಕ್ಕೆ ಮಾಡದೇ ಸಮರ್ಪಕವಾದ ಡ್ರಜ್ಜಿಂಗ್ ಕೆಲಸ ಮಾಡಿಸಬೇಕೆಂಬ ಉದ್ದೇಶದಿಂದ ಶಾಶ್ವತ ಪರಿಹಾರ ನೀಡುವುದು ನನ್ನದಾಗಿದೆ. ಎರಡು ಬಾರಿ ಟೆಂಡರ್ ರದ್ದು ಮಾಡಿಸಿ ಈಗ ಒಂದೇ ಟೆಂಡರ್‌ನಲ್ಲಿ ಉತ್ತಮ ಕೆಲಸ ಮಾಡುವ ಗುತ್ತಿಗೆದಾರರಿಗೆ ನೀಡಿದ್ದೇನೆ ಎಂದ ಅವರು ಶಾಸಕತ್ವದ ಅವಧಿಯಲ್ಲಿ ಕ್ಷೇತ್ರದ ಜನರು ಹಾಕಿ ಮತ ಅವರ ನನ್ನ ಮೇಲೆ ಇಟ್ಟ ಋಣ ಇದೆ ಅದನ್ನು ತೀರಿಸುವುದು ನನ್ನ ಕೆಲಸ ಎಂದರು.
ರಾಜ್ಯ ಪಶ್ಚಿಮ ಘಟ್ಟಗಳ ಕಾರ್ಯ ಪಡೆಯ ಅಧ್ಯಕ್ಷ ಗೋವಿಂದ ನಾಯ್ಕ ಮಾತನಾಡಿ, ಕಾಮಗಾರಿಯಲ್ಲಿ ವಿಳಂಬ ಆಗಿರಬಹುದು. ಆದರೆ ಶಾಸಕರ ಶ್ರಮದಿಂದ ಈಗ ಆಗಿದೆ. ಆದರೆ ಬಂದರ್‌ಗೆ ನಾವು ಕೊಟ್ಟ ಕೊಡುಗೆ ಏನು ಇಲ್ಲ. ಕಾರಣ ಮಾವಿನಕುರ್ವೆ ಬಂದರ್ ಕರಿಕಲ್ ಭಾಗವು ಭಟ್ಕಳದ ಮಟ್ಟಿಗೆ ಬಿಜೆಪಿಯ ಶಕ್ತಿ ಕೇಂದ್ರವಾಗಿದೆ. ಡಾ.ಚಿತ್ತರಂಜನ ಅವರು ಅವರ ಅವಧಿಯಲ್ಲಿ ಕರಿಕಲ್ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದನ್ನು ಸ್ಮರಿಸಿಕೊಂಡ ಅವರು ಅಂದು 1993ರ ಹೋರಾಟದಲ್ಲಿ ಬಂದರನ ಸಾಕಷ್ಟು ನಾಯಕರ ಹೋರಾಟದ ಶ್ರಮ ಯಾವತ್ತು ಶಾಶ್ವತವಾಗಿರಲಿದೆ. ಇನ್ನು ಮುಂಬರಲಿರುವ 2024ರಲ್ಲಿ ಕೇಂದ್ರ ಹಾಗೂ 2023ರ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯೇ ಸರ್ಕಾರ ನಡೆಸಲಿದೆ ನಂತರ ಮತ್ತೆ ನಿಮ್ಮೆಲ್ಲರ ಬೇಡಿಕೆ ಮತ್ತೆ ಈಡೇರಿಸಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಿಂದ ಹಾಗೂ ವಿವಿಧ ಮೀನುಗಾರಿಕಾ ಸಂಘ ಸಂಸ್ಥೆಗಳಿಂದ ಶಾಸಕರಿಗೆ ಹಾಗೂ ಗೋವಿಂದ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಿದರು. ಪ್ರಾಸ್ತಾವಿಕ ಮಾತು ರಮೇಶ ಖಾರ್ವಿ ಅವರು ನಡೆಸಿಕೊಟ್ಟರು. ವೇದಿಕೆಯಲ್ಲಿ ಮಾವಿನಕುರ್ವೆ ಪಂಚಾಯತ ಅಧ್ಯಕ್ಷೆ ಸುಮೀತ್ರಾ ಗೊಂಡ, ಬಿಜೆಪಿ ಮಂಡಲಾಧ್ಯಕ್ಷ ಸುಬ್ರಾಯ ದೇವಾಡಿಗ, ಬಂದರ ಭಾಗದ ಮೀನುಗಾರ ಮುಖಂಡ ಎನ್.ಡಿ.ಖಾರ್ವಿ, ಶ್ರೀನಿವಾಸ ಖಾರ್ವಿ, ವೆಂಕಟರಮಣ ಮೊಗೇರ, ಕೇಶವ ಖಾರ್ವಿ ಮುಂತಾದವರು ಇದ್ದರು.