ಹೊನ್ನಾವರ: ಇತಿಹಾಸ ಮನೋರಂಜನೆಯ ವಸ್ತುವಲ್ಲ. ಇತಿಹಾಸದಲ್ಲಿ ಹಲವು ಸಾಧಕರ ಸಾಧನೆ ನಮಗೆ ಪ್ರೇರಣೆಯಾಗಿದ್ದು, ಅದನ್ನು ನಾವು ಅರ್ಥೈಸಿಕೊಳ್ಳಬೇಕಿದೆ ಎಂದು ಶಾಸಕ ಸುನೀಲ ನಾಯ್ಕ ಹೇಳಿದರು.
ಪಟ್ಟಣದ ಪೊಲೀಸ್ ಮೈದಾನದಲ್ಲಿ ಸ್ವಾಮಿ ವಿವೇಕಾನಂದ ಜಯಂತಿಯ ಅಂಗವಾಗಿ ಯುವ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ಸಾಂಸ್ಕೃತಿಕ ವೈಭವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸ್ವಾಮಿ ವಿವೇಕಾನಂದರ ಇತಿಹಾಸವನ್ನು ಆದರ್ಶಗುಣವನ್ನು ಇಂದಿನ ಯುವಕರು ಅಳವಡಿಸಿಕೊಳ್ಳಬೇಕಿದೆ. ಇಂತಹ ಮಹಾನ್ ಸಾಧಕರ ಜಯಂತಿಯನ್ನು ಕೇವಲ ನಾಮಕಾವಸ್ಥೆಗೆ ಕಾರ್ಯಕ್ರಮ ಮಾಡದೇ ಮುಂದಿನ ಪೀಳಿಗೆಗೆ ಆದರ್ಶವಾಗುವ ರೀತಿಯಲ್ಲಿ ಆಯೋಜಿಸುವ ಕಾರ್ಯ ನಾವೆಲ್ಲರೂ ಮಾಡಬೇಕಿದೆ ಎಂದರು.
ತಾಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಸುರೇಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಪವಿಭಾಗಾಧಿಕಾರಿ ಮಮತಾದೇವಿ, ಡಿವೈಎಸ್‌ಪಿ ಶ್ರೀಕಾಂತ, ಪಟ್ಟಣ ಪಂಚಾಯತಿ ಅಧ್ಯಕ್ಷೆ ಭಾಗ್ಯ ಮೇಸ್ತ, ಇ.ಓ ಸುರೇಶ ನಾಯ್ಕ, ಸಿ.ಪಿ.ಐ ಶ್ರೀಧರ ಎಸ್.ಆರ್., ಗ್ರಾಮ ಪಂಚಾಯತಿ ಅಧ್ಯಕ್ಷರಾದ ಮಂಜುನಾಥ ನಾಯ್ಕ, ಜಿ.ಜಿ.ಶಂಕರ್, ರಜನಿ ನಾಯ್ಕ, ವಿಘ್ನೇಶ್ವರ ಹೆಗಡೆ, ಪ್ರಮೋದ ನಾಯ್ಕ, ಯುವಜನ ಸೇವಾ ಕ್ರೀಡಾಧಿಕಾರಿ ಸುಧೀಶ ನಾಯ್ಕ, ಯುವ ಒಕ್ಕೂಟದ ಅಧ್ಯಕ್ಷ ವಿನಾಯಕ ನಾಯ್ಕ ಉಪಸ್ಥಿತರಿದ್ದರು.
ಉಪನ್ಯಾಸಕ ಪ್ರಶಾಂತ ಮೂಡಲಮನೆ ಹಾಗೂ ಶಂಕರ ಗೌಡ ಕಾರ್ಯಕ್ರಮ ನಿರ್ವಹಿಸಿದರು. ಸ್ವಾಮಿ ವಿವೇಕಾನಂದ ಜಯಂತಿಯ ಪ್ರಯುಕ್ತ ಪ್ರಾಥಮಿಕ ಮತ್ತು ಪೌಢಶಾಲಾ ವಿದ್ಯಾರ್ಥಿಗಳಿಗೆ ಆಯೋಜಿಸಿದ ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸ್ವಾಮಿ ವಿವೇಕಾನಂದರ ಛದ್ಮವೇಷ ಸ್ಪರ್ಧೆಯ ವಿಜೇತರಿಗೆ ಬಹುಮಾನ ನೀಡಲಾಯಿತು. ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವ ಯುವಕ ಸಂಘಗಳಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದ ನಂತರ ದೇಶಭಕ್ತಿ ಗೀತೆ, ಜಾನಪದ ಗೀತೆಗಳ ಸಾಂಸ್ಕೃತಿಕ ವೈಭವ, ಒಶಿಯನ್ ಹಾರ್ಟ್ ಬ್ರೇಕರ್ ತಂಡದಿಂದ ಜರುಗಿತು.