ಕುಮಟಾ: ಕ್ಷೇತ್ರದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಖಾರ್ಲ್ಯಂಡ್ ನಿರ್ಮಾಣವಾಗುತ್ತಿದ್ದು, ಕೆಲವೆಡೆ ಕಳಪೆ ಕಾಮಗಾರಿ ಮಾಡಲಾಗುತ್ತಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಭಾಸ್ಕರ್ ಪಟಗಾರ್ ಆರೋಪಿಸಿದ್ದಾರೆ.
ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 100 ಕೋಟಿ ವೆಚ್ಚದಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ಖಾರ್ಲ್ಯಾಂಡ್ ನಿರ್ಮಾಣ ಹಾಗೂ ಹೂಳೆತ್ತುವ ಕಾಮಗಾರಿ ಪ್ರಾರಂಭಗೊಂಡಿದ್ದು, ಕೆಲವು ಭಾಗದಲ್ಲಿ ಇನ್ನು ಪ್ರಾರಂಭವಾಗಬೇಕಾಗಿದೆ. ಉಪ್ಪು ನೀರು ನದಿಗಳಿಂದ ನುಗ್ಗಿ ಸಾಕಷ್ಟು ರೀತಿಯಲ್ಲಿ ಸಾರ್ವಜನಿಕರು ಸ್ಥಳೀಯರು ತೊಂದರೆ ಎದುರಿಸುತ್ತಿದ್ದ ಹಿನ್ನಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ ವಿವಿಧಡೆಯಲ್ಲಿ ಹತ್ತು, ಹದಿನೈದು ಕೋಟಿ ವೆಚ್ಚದಲ್ಲಿ ಈ ರೀತಿಯ ಕಾಮಗಾರಿಯು ಹಂಚಿಕೆಯಾಗಿದೆ. ಆದರೆ ಕೆಲವು ಕಾಮಗಾರಿ ಪ್ರಾರಂಭವಾಗಿದ್ದು, ಗುಣಮಟ್ಟದಲ್ಲಿ ಕಾಮಗಾರಿ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಇನ್ನು ಕಾಮಗಾರಿ ನಡೆಯುತ್ತಿರುವ ಬೆಟ್ಕುಳಿ, ಪಡುವಣಿ ಭಾಗದ ಪ್ರದೇಶಕ್ಕೆ ಭಾಸ್ಕರ್ ಪಟಗಾರ್ ಭೇಟಿ ನೀಡಿ ಗುತ್ತಿಗೆ ಪಡೆದ ಇಂಜಿನಿಯರ್ ಗೆ ತರಾಟೆಗೆ ತೆಗೆದುಕೊಂಡರು. ಸರ್ಕಾರವು ನಾವು ಕಟ್ಟಿದ ತೆರಿಗೆಯಿಂದ ಸಾರ್ವಜನಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುತ್ತದೆ. ಅದನ್ನು ಸಮರ್ಪಕವಾಗಿ ನಿರ್ವಹಿಸುವುದು ಇಲಾಖೆಯ ಹಾಗೂ ಗುತ್ತಿಗೆ ಪಡೆದ ಕಂಪೆನಿಯ ಕೆಲಸವಾಗಿದೆ ಎಂದಿದ್ದಾರೆ. ಗುತ್ತಿಗೆ ಪಡೆದ ಕಂಪೆನಿಯು ಕಾಮಗಾರಿಯನ್ನ ಕಳಪೆ ಮಾಡಬಾರದು. ಸ್ಥಳೀಯರು ಸಾರ್ವಜನಿಕರು ಕಾಮಗಾರಿಯ ಗುಣಮಟ್ಟದ ಬಗ್ಗೆ ಗಮನಿಸುತ್ತಿರುವಂತೆ ಮನವಿ ಮಾಡಿಕೊಂಡರು.
ಕ್ಷೇತ್ರದಾದ್ಯಂತ ಎಲ್ಲಾ ಖಾರ್ಲ್ಯಾಂಡ್ ಹಾಗೂ ಹೂಳೆತ್ತುವ ಕಾಮಗಾರಿಯನ್ನ ಮುಂದಿನ ದಿನದಲ್ಲಿ ವೀಕ್ಷಿಸಲಾಗುವುದು. ಹಾಗೇನಾದರೂ ಕಳಪೆ ಹಾಗೂ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದಲ್ಲಿ ಸಾರ್ವಜನಿಕರ ನೇತೃತ್ವದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.