ಸಿದ್ದಾಪುರ: ತಾಲೂಕಿನ ಹಿರಿಯ ಸಾತ್ವಿಕ ಸಾಹಿತಿ , ನಿವೃತ್ತ ಶಿಕ್ಷಕರಾದ ಆರ್.ಕೆ ಹೊನ್ನೆಗುಂಡಿಯವರು ತಾಲೂಕು 6ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಲಾಗಿದ್ದು, ತಾಲೂಕ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಅವರ ಮನೆಗೆ ತೆರಳಿ ಅಭಿನಂದಿಸಲಾಯಿತು.
ಕಸಾಪ ತಾಲೂಕ ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ನೂತನವಾಗಿ ಆಯ್ಕೆಯಾದ ಹಿರಿಯ ಸಾಹಿತಿ ಆರ್.ಕೆ.ಹೊನ್ನೆಗುಂಡಿಯವರು ಕೇವಲ ಸಾಹಿತಿಯಲ್ಲದೆ ಸಂಗೀತಗಾರ, ನಾಟಕ ಕಲಾವಿದರು, ನಾಟಕ ನಿರ್ದೇಶಕರೂ ಕೂಡ ಆಗಿದ್ದಾರೆ. ಇಂತಹ ಸಾಧಕರಿಗೆ ಸರ್ವಾಧ್ಯಕ್ಷತೆ ವಹಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಹೊನ್ನೆಗುಂಡಿಯವರು ಡಾ.ದಿನಕರ ದೇಸಾಯಿ, ಅಮರ ಅ.ನ.ಕೃ. ಸ್ವಾತಂತ್ರ‍್ಯ ಹೋರಾಟಗಾರರಾದ ದಿ.ತಿಮ್ಮಪ್ಪ ನಾಯಕ, ಗೋವಿಂದ ಶಾನಭಾಗ ಇವರುಗಳ ಕುರಿತು ವ್ಯಕ್ತಿ ಚಿತ್ರವನ್ನೂ, ಪುಣ್ಯಕ್ಷೇತ್ರ ಇಡಗುಂಜಿ ಕ್ಷೇತ್ರ ಮಹಾತ್ಮೆ ಹಾಗೂ ಕನ್ನಡ ಸಾಹಿತ್ಯದಲ್ಲೇ ಬಲು ಅಪರೂಪದ ನಾಟ್ಯ ವೈಭವದ ವಿನೂತನ ಶೈಲಿಯ ಆರು ನೃತ್ಯ ನಾಟಕಗಳನ್ನು ಬರೆದು ಕನ್ನಡ ಸಾರಸ್ವತ ಲೋಕಕ್ಕೆ ಅಕ್ಷರ ಕೊಡುಗೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪತ್ರಕರ್ತ ಗಂಗಾಧರ ಕೊಳಗಿ, ತಾಲೂಕ ಕ.ಸಾ.ಪ. ಮಾಜಿ ಅಧ್ಯಕ್ಷ ಎಮ್.ಕೆ.ನಾಯ್ಕ ಹೊಸಳ್ಳಿ, ಕಸಾಪ ಕೋಶಾಧ್ಯಕ್ಷ ಪಿ.ಬಿ.ಹೊಸೂರು, ಗೌರವ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಶಿರಳಗಿ, ಉಪನ್ಯಾಸಕ ರತ್ನಾಕರ ನಾಯ್ಕ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಭುವನೇಶ್ವರಿ ಕನ್ನಡ ಸಂಘದ ಅಧ್ಯಕ್ಷ ಅಣ್ಣಪ್ಪ ಕೊಂಡ್ಲಿ ಉಪಸ್ಥಿತರಿದ್ದು ಶುಭ ಕೋರಿದರು.