ಅಂಕೋಲಾ: ಸಮಾಜವನ್ನು ಸನ್ಮಾರ್ಗದಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಂದಿರುವ ಧರ್ಮಗುರುಗಳು ಸದಾಚಾರವನ್ನು ಪಾಲಿಸುವುದು ಅಗತ್ಯವಿದೆ. ರಾಜಕಾರಣಿಗಳು, ಮಾಧ್ಯಮಗಳು ಸಹ ಇಂತಹ ವಿಷಯದಲ್ಲಿ ಸಂವೇದನೆಯಿoದ ನಡೆದುಕೊಳ್ಳುವುದು ಅನಿವಾರ್ಯ ಎಂದು ಮಾಜಿ ಶಾಸಕ ಸತೀಶ ಸೈಲ್ ಅಭಿಪ್ರಾಯಪಟ್ಟರು.
ಬುಧವಾರ ಪಟ್ಟಣದ ಗೋಖಲೆ ಸೆಂಟನರಿ ಕಾಲೇಜಿನಲ್ಲಿ ‘ಧರ್ಮಗುರುಗಳಿಗೆ ಬ್ರಹ್ಮಚರ್ಯ ಕಡ್ಡಾಯವಲ್ಲ’ ಎಂಬ ವಿಷಯದ ಕುರಿತು ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಅಂತರ ಕಾಲೇಜು ಚರ್ಚಾಸ್ಪರ್ಧೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಯುವಕರಿಗೆ ಆದರ್ಶಪ್ರಾಯರಾಗಿರುವ ಸ್ವಾಮಿ ವಿವೇಕಾನಂದರ ಜನ್ಮದಿನ ಪ್ರಯುಕ್ತ ರಾಷ್ಟ್ರೀಯ ಯುವ ದಿನಾಚರಣೆ ಆಚರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಯುವ ಜನಾಂಗವನ್ನು ಚಿಂತನೆಗೆ ತೊಡಗಿಸುವ ಇಂತಹ ಚರ್ಚಾಕೂಟ ಏರ್ಪಡಿಸಿರುವುದು ಔಚಿತ್ಯಪೂರ್ಣವಾಗಿದೆ ಎಂದು ಅವರು ಹೇಳಿದರು.
ನಿವೃತ್ತ ಪ್ರಾಚಾರ್ಯ ಜಿ.ಪಿ.ನಾಯಕ, ಧರ್ಮವು ಜನಮಾನಸದ ಮೇಲೆ ಇಂದಿಗೂ ಪ್ರಭಾವಶಾಲಿಯಾಗಿದೆ. ಅಕ್ಕಮಹಾದೇವಿ, ಮಾತಾ ಅಮೃತಾನಂದಮಯಿ, ಮಾತೆ ಮಹಾದೇವಿ, ಸಜ್ಜಲಗುಡ್ಡದ ಶರಣಮ್ಮ ಮುಂತಾದ ಮಹಿಳೆಯರು ಸಹ ಧಾರ್ಮಿಕ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದ್ದಾರೆ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಅಶೋಕಕುಮಾರ ಧರ್ಮ ಸೂಕ್ಷö್ಮತೆ ಇರುವ ವಿಷಯದ ಕುರಿತು ಚರ್ಚಾಪಟುಗಳು ಕ್ಷಕಿರಣ ಬೀರಿದ್ದಾರೆ ಎಂದು ಶ್ಲಾಘಿಸಿದರು.
ಡಿಬೆಟ್ ಕಮೀಟಿ ಚೇರಮನ್ ಡಾ.ಎಸ್.ವಿ.ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾಲೇಜಿನ ಜನರಲ್ ಸೆಕ್ರೆಟರಿ ಸೃಜನ್ ನಾಯಕ ಪರಿಚಯಿಸಿದರು. ನಿರ್ಣಾಯಕರಾಗಿ ಸಾಹಿತಿ ಮೋಹನ ಹಬ್ಬು, ನ್ಯಾಯವಾದಿ ಉಮೇಶ ನಾಯ್ಕ ಹಾಗೂ ಪತ್ರಕರ್ತ ವಾಸುದೇವ ಗುನಗಾ ಕಾರ್ಯನಿರ್ವಹಿಸಿದರು. ಯುನಿಯನ್ ವಿಭಾಗದ ಮುಖ್ಯಸ್ಥ ಪ್ರೊ. ಎಂ.ಎಂ. ಪಾಟೀಲ್ ಫಲಿತಾಂಶ ಪ್ರಕಟಿಸಿದರು. ವಿದ್ಯಾರ್ಥಿಗಳಾದ ಸೃಷ್ಠಿ ನಾಯಕ ಮತ್ತು ಪನ್ನಗ ನಾಯಕ ನಿರೂಪಿಸಿದರು. ಪ್ರಾಧ್ಯಾಪಕರಾದ ವಿ.ಎಂ. ನಾಯ್ಕ, ಎಸ್.ಆರ್. ಶಿರೋಡ್ಕರ, ಡಿ.ಪಿ. ಕುಚಿನಾಡ, ಆರ್.ಪಿ. ಭಟ್, ಸುಗಂಧ ನಾಯಕ ಮುಂತಾದವರು ಉಪಸ್ಥಿತರಿದ್ದರು. ನೇಸರ ಕವರಿ ವಂದಿಸಿದರು.
ಧರ್ಮಗುರುಗಳು ಸದಾಚಾರ ಪಾಲಿಸಬೇಕು: ಸತೀಶ ಸೈಲ್
