ಶಿರಸಿ: ತಾಲೂಕಿನ ಗೋಳಿಯ ಶ್ರೀಸಿದ್ಧಿವಿನಾಯಕ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಟಿಯ ಪ್ರಯುಕ್ತ ಗಿಳಿಗುಂಡಿಯ ಸ್ವರ ಸಂವೇದನಾ ಪ್ರತಿಷ್ಠಾನದಿಂದ ಏರ್ಪಡಿಸಲಾಗಿದ್ದ ನಾದ ಪೂಜಾ ಕಾರ್ಯಕ್ರಮವು ಅತ್ಯಂತ ಭಕ್ತಿ ಭಾವದಿಂದ ನಡೆದಿದ್ದು, ಸಾವಿರಾರು ಭಕ್ತರು ಪಾಲ್ಗೊಂಡು ಕಾರ್ಯಕ್ರಮದ ಯಶಸ್ಸಿಗೆ ಕಾರಣೀಕರ್ತರಾದರು.
ಮಧ್ಯಾಹ್ನದಿಂದಲೇ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶ್ರೀಮತಿ ಸುಪ್ರಿಯಾ ಹಿತ್ಲಳ್ಳಿ, ಗುರುಪ್ರಸಾದ ಹೆಗಡೆ ಗಿಳಿಗುಂಡಿ, ವಿನಾಯಕ ಮುತ್ಮುರ್ಡು, ನಾಗರಾಜ ಹೆಗಡೆ ಶಿರ್ನಾಲಾ,ಅಜಯ ಹೆಗಡೆ ಬೆಣ್ಣೆಮನೆ ಹಾಗೂ ಕರ್ನಾಟಕ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಪಂ.ಎಂ.ಪಿ.ಹೆಗಡೆ ಪಡಿಗೇರಿ, ಭರತನಾಟ್ಯದಲ್ಲಿ ನವ್ಯಾ ಭಟ್ ಮುಂತಾದ ಖ್ಯಾತ ಕಲಾವಿದರು ಪಾಲ್ಗೊಂಡು ತಡರಾತ್ರಿವರೆಗೂ ಕಲಾ ಸೇವೆಯನ್ನು ನಡೆಸಿಕೊಟ್ಟರು.
ಇದೇ ಸಂದರ್ಭದಲ್ಲಿ ಪ್ರಸ್ತುತ ವರ್ಷದ ಕಲಾಶ್ರೀ ಪ್ರಶಸ್ತಿಗೆ ಪಾತ್ರರಾದ ಪಂ.ಎಂ.ಪಿ.ಹೆಗಡೆ ಪಡಿಗೆರೆಯವರನ್ನು ಗಿಳಿಗುಂಡಿ ಪ್ರತಿಷ್ಠಾನ ಹಾಗೂ ಗೋಳಿ ದೇವಸ್ಥಾನದ ವತಿಯಿಂದ ಸನ್ಮಾನಿಸಲಾಯಿತು.
ಸನ್ಮಾನಿತ ಪಂ.ಎಂ.ಪಿ.ಹೆಗಡೆ ಮಾತನಾಡಿ, ಆಯಾ ವ್ಯಕ್ತಿ ತಾನಿರುವ ಕ್ಷೇತ್ರದಲ್ಲಿ ಶೃದ್ಧೆ ಹಾಗೂ ಪ್ರಾಮಾಣಿಕವಾಗಿ ಸಾಧನೆಯ ಹಾದಿಯಲ್ಲಿ ತೊಡಗಿಕೊಂಡಾಗ ಪ್ರಶಸ್ತಿ ಪುರಸ್ಕಾರಗಳು ಸಹಜವಾಗಿ ಬರುತ್ತವೆ. ಯಾವಾಗಲೂ ಪ್ರಶಸ್ತಿ ಹಿಂದೆ ನಾವು ಹೋಗದೇ, ಅವುಗಳೇ ನಮ್ಮನ್ನರಸಿ ಬರುವ ರೀತಿಯಲ್ಲಿ ಪ್ರಯತ್ನಿಸಬೇಕು. ಹಾಗಾದಾಗಮಾತ್ರ ಜೀವನ ಸಾರ್ಥಕ ಎಂದು ಹೇಳುತ್ತಾ 45ವರ್ಷಗಳ ಹಿಂದಿನ ಗೋಳಿಯ ಪೌರಾಣಿಕ ನಾಟಕ ಮತ್ತು ತಮ್ಮ ಒಡನಾಡಿಗಳನ್ನು ನೆನಪಿಸಿಕೊಂಡರು.
ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಎಲ್.ಹೆಗಡೆ ಹಲಸಿಗೆ ಸ್ವಾಗತಿಸಿ, ಸನ್ಮಾನ ಪತ್ರ ವಾಚಿಸಿದರು.