ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಹಣತೆಯ ದಾಂಡೇಲಿ ತಾಲ್ಲೂಕು ಘಟಕದ ಉದ್ಘಾಟನಾ ಸಮಾರಂಭವು ನಗರದ ಸಂತೋಷ್ ಹೋಟೆಲ್ ಸಭಾಭವನದಲ್ಲಿ ಜರುಗಿತು.
ದಾಂಡೇಲಿ ತಾಲ್ಲೂಕು ಘಟಕವನ್ನು ಉದ್ಘಾಟಿಸಿ ಮಾತನಾಡಿದ ಕವಿ ಹಾಗೂ ಹಣತೆ ಉತ್ತರ ಕನ್ನಡ ಜಿಲ್ಲಾ ಘಟಕದ ಸದಸ್ಯರಾದ ಪ್ರೊ.ನಾಗರಾಜ ಹೆಗಡೆ ಅಪಗಾಲ ಅವರು ಕಳೆದ 20 ವರ್ಷಗಳಿಂದ ಕನ್ನಡದ ಪರಿಚಾರಿಕೆಯನ್ನು ಮಾಡಿಕೊಂಡು ಬರುತ್ತಿರುವ ಹಣತೆ ಸಂಘಟನೆ ಜಿಲ್ಲೆಯಾಧ್ಯಂತ ಪಸರಿಸಬೇಕು. ಆ ಮೂಲಕ ಸಾಹಿತ್ಯಿಕ, ಸಾಂಸ್ಕೃತಿಕ ಸೇವೆಯನ್ನು ಮಾಡಬೇಕೆಂಬ ಸದುದ್ದೇಶದಿಂದ ತಾಲ್ಲೂಕು ಘಟಕ ರಚನೆಯಾಗಿರುವುದು ಉತ್ತಮವಾದ ಕಾರ್ಯ ಎಂದರು. ಹಣತೆಯ ಆಶಯಗಳನ್ನು ಮುಂದಿಟ್ಟುಕೊoಡು ದಾಂಡೇಲಿಯ ನೂತನ ಘಟಕ ಸಾಹಿತ್ಯಿಕ, ಸಾಂಸ್ಕೃತಿಕ ಸೇವೆಯನ್ನು ಮಾಡಲೆಂದು ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹಣತೆ ಸಂಘಟನೆಯ ಪ್ರವರ್ತಕರು ಮತ್ತು ಜಿಲ್ಲಾಧ್ಯಕ್ಷರಾದ ಅರವಿಂದ ಕರ್ಕಿಕೋಡಿಯವರು ವಿಭಿನ್ನ ಉದ್ದೇಶದಿಂದ ಹಣತೆ ಸಾಹಿತ್ಯಿಕ, ಸಾಂಸ್ಕೃತಿಕ ಜಗಲಿ ಆರಂಭಗೊoಡಿದೆ. ಹಣತೆಯ ಮೂಲಕ ಸ್ಥಳೀಯ ಕಲಾವಿದರುಗಳನ್ನು ಮತ್ತು ಶ್ರಮಸಂಸ್ಕೃತಿಯ ಮೂಲಕ ಬದುಕು ಕಟ್ಟಿಕೊಂಡಿರುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಕೆಲಸವಾಗಬೇಕಾಗಿದೆ. ಶ್ರಾವಣ, ದೀಪಾವಳಿಗೆ ಮಾತ್ರ ಕವಿಗೋಷ್ಟಿ ನಡೆದರೇ ಸಾಲದು, ಅದು ಶ್ರಾವಣ, ದೀಪಾವಳಿಯ ಜೊತೆಗೆ ರಂಜಾನ್, ಕ್ರಿಸ್ಮಸ್ ಸಂದರ್ಭಗಳಲ್ಲಿಯೂ ನಡೆಯಬೇಕು. ಹಾಗಾದಾಗ ಮಾತ್ರ ಭ್ರಾತೃತ್ವ ಸದೃಢಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಹಣತೆ ಭಾತೃತ್ವವನ್ನು ಬೆಳಗಿಸುವ ಹಣತೆಯಾಗಬೇಕು ಮತ್ತು ಹಣತೆಯಾಗಲಿದೆ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಹಣತೆ ಹೊನ್ನಾವರ ತಾಲೂಕು ಘಟಕದ ಅಧ್ಯಕ್ಷರಾದ ಪ್ರೊ.ಪ್ರಶಾಂತ ಹೆಗಡೆ ಮೂಡಲಮನೆ ಅವರು ಕಣ್ಣುಗಳಲ್ಲಿ ಕನಸುಗಳನ್ನಿಟ್ಟುಕೊಂಡವರನ್ನು ಒಟ್ಟುಗೂಡಿಸುವ ಪ್ರಯತ್ನದ ಪಯಾಣದೊಂದಿಗೆ ಹಣತೆ ಜಿಲ್ಲೆಯಾದ್ಯಂತ ಬೆಳಕು ಹಚ್ಚುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲಿದೆ. ದಾಂಡೇಲಿಯ ಹಣತೆ ಘಟಕ ಮಾದರಿ ಹಾಗೂ ಸ್ಮರಣೀಯ ಕಾರ್ಯಕ್ರಮಗಳನ್ನು ಮೂಡುವ ಮೂಲಕ ಉತ್ತಮ ಸಂಘಟನೆಯಾಗಿ ಮೂಡಿಬರಲೆಂದರು. ಹಣತೆಯ ಉತ್ತರ ಕನ್ನಡ ಜಿಲ್ಲಾ ಪ್ರಧಾನ ಸಂಚಾಲಕರಾದ ಎನ್.ಜಯಚಂದ್ರನ್ ಅವರು ಹಣತೆ ಸಂಘಟನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು.
ವೇದಿಕೆಯಲ್ಲಿ ಹಣತೆಯ ಜಿಲ್ಲಾ ಸಮಿತಿ ಸದ್ಸಯರಾದ ಉಪೇಂದ್ರ ಘೋರ್ಪಡೆ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷರಾದ ರಾಮಕೃಷ್ಣ ಗುನಗ, ಜೋಯಿಡಾ ತಾಲೂಕು ಘಟಕದ ಅಧ್ಯಕ್ಷರಾದ ಎಂಟನಿ ಜಾನ್ ಅವರು ಉಪಸ್ಥಿತರಿದ್ದರು. ಜನತಾ ವಿದ್ಯಾಲಯ ಕನ್ನಡ ಮಾಧ್ಯಮ ಹಿ.ಪ್ರಾ.ಶಾಲೆಯ ಮುಖ್ಯೋಪಾಧ್ಯಯಿನಿ ನಂದಿನಿ ನಾಯ್ಕ ಅವರು ಪ್ರಾರ್ಥನೆ ಹಾಡಿದರು. ಹಣತೆಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ರಾಘವೇಂದ್ರ ಗಡೆಪಪ್ನವರ ಸ್ವಾಗತಿಸಿದರು. ಅಬ್ದುಲ್ ರೆಹಮಾನ್ ಅವರು ಅತಿಥಿಗಳನ್ನು ಪರಿಚಯಿಸಿದರು. ಸೋಮಶೇಖರ್ ಅಂಧಕಾರ ಅವರು ವಂದಿಸಿದರು. ಪ್ರಾಚಾರ್ಯ ಎನ್.ಆರ್.ನಾಯ್ಕ ಅವರು ಕಾರ್ಯಕ್ರಮ ನಿರೂಪಿಸಿದರು.