ಸಿದ್ದಾಪುರ: ಲೂಯಿ ಬ್ರೈಲ್ ಲಿಪಿ ಸಂಶೋಧನೆಯಿoದಾಗಿ ಜಗತ್ತಿನಲ್ಲಿ ಅಂಧರ ಬಾಳಿಗೆ ಬೆಳಕನ್ನು ನೀಡುವ ಮಹಾನ್ ಕೆಲಸ ಆಗಿದ್ದು, ಅಂಧರನ್ನು ಪ್ರಗತಿಯ ಮುಖ್ಯವಾಹಿನಿಗೆ ತರಬೇಕಾದದ್ದು ಎಲ್ಲರ ಜವಾಬ್ದಾರಿಯಾಗಿದೆ. ಸಿದ್ದಾಪುರದಲ್ಲಿನ ಅಂಧ ಮಕ್ಕಳ ವಸತಿ ಶಾಲೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಅಂಧರಿಗೆ ಮಾದರಿಯಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷ ಕಮಲಾಕ್ಷ ಡಿ. ಹೇಳಿದರು.
ಅವರು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ, ಅಭಿಯೋಜನಾ ಇಲಾಖೆ, ಆರಕ್ಷಕ ಇಲಾಖೆ ಹಾಗೂ ವಿವಿಧ ಸರಕಾರಿ ಇಲಾಖೆಗಳ ಸಂಘ- ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಆಶಾಕಿರಣ ಟ್ರಸ್ಟ್ ಅಡಿಯಲ್ಲಿ ಲೂಯಿಬ್ರೈಲ್ ದಿನ ಮತ್ತು ಶಿಕ್ಷಣ ಹಕ್ಕು ಕಾಯಿದೆ ಅಂಗವಾಗಿ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಗಿಡವನ್ನು ನೆಟ್ಟು ಸಾಂಕೇತಿಕ ವನಮಹೋತ್ಸವವನ್ನು ಕೂಡಾ ನಡೆಸಲಾಯಿತು.
ಸಿವಿಲ್ ನ್ಯಾಯಾಧೀಶ ಮತ್ತು ಪ್ರಥಮ ದರ್ಜೆ ನ್ಯಾಯಿಕ ದಂಡಾಧಿಕಾರಿಗಳು ಹಾಗೂ ಸದಸ್ಯ ಕಾರ್ಯದರ್ಶಿಗಳು ಆದ ತಿಮ್ಮಯ್ಯ ಜಿ. ಮಾತನಾಡಿ, ಅಂಧರಿಗೆ ಉತ್ತಮ ಶಿಕ್ಷಣವನ್ನು ನೀಡುವುದರ ಮೂಲಕ ಅವರ ವ್ಯಕ್ತಿತ್ವ ವಿಕಸನಕ್ಕೆ ಅವಕಾಶ ಸಿಗಲು ಸಾಧ್ಯ, ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದು ಹೇಳಿ ಕವಿ ಜಿ.ಆರ್. ಲಕ್ಷ್ಮಣರಾವ್ರವರ ಕವಿತೆಯೊಂದನ್ನು ವಾಚಿಸಿದರು.
ಸಹಾಯಕ ಸರ್ಕಾರಿ ಅಭಿಯೋಜಕ ಚಂದ್ರಶೇಖರ ಎಚ್.ಎಸ್. ಮತ್ತು ವಕೀಲರ ಸಂಘದ ಅಧ್ಯಕ್ಷ ಜೆ.ಜಿ.ಹೆಗಡೆ ಮತ್ತು ನ್ಯಾಯಾಲಯದ ಸಿಬ್ಬಂದಿ ಮಂಜುನಾಥ ಮಾತನಾಡಿದರು. ಆಶಾಕಿರಣ ಟ್ರಸ್ಟ್ನ ಉಪಾಧ್ಯಕ್ಷ ಸಿ.ಎಸ್.ಗೌಡರ್ ಹೆಗ್ಗೋಡ್ಮನೆ ಆಶಾಕಿರಣ ಟ್ರಸ್ಟ್ನ ಪ್ರಗತಿಯ ಕುರಿತು ವಿವರಿಸಿದರು. ಲೂಯಿ ಬ್ರೆöÊಲ್ರವರ ಕುರಿತು ಬ್ರೈಲ್ ಶಿಕ್ಷಕಿ ರೇಖಾ ಸಿ.ಗೌಡ ಮಾತನಾಡಿದರು.
ಆಶಾಕಿರಣ ಟ್ರಸ್ಟನ ಅಧ್ಯಕ್ಷ ಡಾ.ರವಿ ಹೆಗಡೆ ಹೂವಿನ್ಮನೆ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನ್ಯಾಯಾಂಗ ಇಲಾಖೆ ಮಾನವೀಯ ಕಳಕಳಿಯೊಂದಿಗೆ ಸ್ಪಂದಿಸುತ್ತಿರುವುದು ಅತ್ಯಂತ ಮಹತ್ವದ ವಿಷಯ. ಅಂಧಮಕ್ಕಳಿಗೆ ಶಿಕ್ಷಣವನ್ನು ಉತ್ತಮವಾಗಿ ನೀಡಲು ಪ್ರಯತ್ನಿಸಲಾಗುತ್ತಿದೆ. ಈ ಶಾಲೆಯ ಮೂಲಕ ಅನೇಕ ಪ್ರತಿಭಾವಂತರು ಹೊರಬಂದಿದ್ದು ತಮಗೆಲ್ಲಾ ಸಂತಸವಾಗಿದೆ ಎಂದು ಹೇಳಿದರು. ಮಹೇಂದ್ರ ಶೇಖರ ಚನ್ನಯ್ಯ ಸ್ವಾಗತಿಸಿದರು. ಶಿಕ್ಷಕಿ ಚಿತ್ರಾರವರು ನಿರೂಪಿಸಿದರು. ಚನ್ನಪ್ಪರವರು ವಂದಿಸಿದರು.