ಕಾರವಾರ: ಇಲ್ಲಿನ ಕಾರವಾರ ಎಜುಕೇಶನ್ ಸೊಸೈಟಿಯ ಹಿಂದೂ ಹೈಸ್ಕೂಲ್‌ನ 125ನೇ ವರ್ಷಾಚರಣೆ ಕಾರ್ಯಕ್ರಮವು ಜ.21ರಿಂದ 23ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಎಸ್.ಪಿ.ಕಾಮತ್ ಹೇಳಿದರು.
ಹಿಂದೂ ಹೈಸ್ಕೂಲ್‌ನಲ್ಲಿ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಮಾತನಾಡಿದ ಅವರು, ಕಾರವಾರದಲ್ಲಿ ಯಾವ ಶಾಲೆಗಳೂ ಇಲ್ಲದ ಸಂದರ್ಭದಲ್ಲಿ ಹಿಂದೂ ಹೈಸ್ಕೂಲ್ ಚಾಲ್ತಿಗೆ ಬಂದಿತ್ತು. 1935ರ ಸಂದರ್ಭದಲ್ಲಿ ಕಾರವಾರ ಎಜುಕೇಶನ್ ಸೊಸೈಟಿಯಡಿ ಹಿಂದೂ ಹೈಸ್ಕೂಲ್ ಕಾರ್ಯಾಚರಿಸಲು ಪ್ರಾರಂಭಿಸಿತು. ಯಾವುದೇ ಜಾತಿ, ಪಂಥ, ಧರ್ಮ, ಭಾಷೆಗಳ ಭೇದ- ಭಾವವಿಲ್ಲದೆ ಜಾತ್ಯಾತೀತವಾಗಿ ಅಂದಿನಿಂದ ಇಂದಿನವರೆಗೂ ನಡೆದುಕೊಂಡು ಬಂದಿದ್ದು, ಈ ವರ್ಷ 125ರ ಸಂಭ್ರಮವನ್ನು ಅದ್ಧೂರಿಯಾಗಿ ಹಾಗೂ ವಿಶೇಷವಾಗಿ ಉಪಯೋಗಿಯಾಗಿ ಆಚರಿಸುತ್ತಿದ್ದೇವೆ ಎಂದರು.
ಜ.21ರoದು ಮೊದಲ ದಿನದ ಕಾರ್ಯಕ್ರಮವನ್ನ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್.ವಿ.ರಮಣ ಉದ್ಘಾಟಿಸಲಿದ್ದಾರೆ. ಶಾಸಕಿ ರೂಪಾಲಿ ನಾಯ್ಕ ಅವರು ಉಪಸ್ಥಿತರಿರಲಿದ್ದಾರೆ. ವಿಶೇಷವಾಗಿ ಅಂಧರಾಗಿದ್ದೂ ಸಹ ಜರ್ಮನ್ ಸಾಹಿತ್ಯ ಸೇರಿದಂತೆ ವಿವಿಧ ಭಾಷೆಗಳಲ್ಲಿ ಡಾಕ್ಟರೇಟ್ ಪಡೆದಿರುವ ಡಾ.ಊರ್ವಿ ಜಂಗಮ್ ಅವರು ಹಾಜರಿದ್ದು ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲಿದ್ದಾರೆ ಎಂದು ತಿಳಿಸಿದರು. ಎರಡನೇ ದಿನ ಮೂರು ಸೆಮಿನಾರ್ ಗಳನ್ನು ಆಯೋಜಿಸಲಾಗಿದೆ. ಹೈದರಾಬಾದ್ ನ ಮುಕ್ತಿ ಅವರಿಂದ ಕಥಕ್ಕಳಿ ನಡೆಯಲಿದೆ. ಮೂರನೇ ದಿನ ಹಿಂದೂ ಹೈಸ್ಕೂಲ್, ಸುಮತಿ ದಾಮ್ಲೆ ಹಾಗೂ ಬಾಲಮಂದಿರದ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೂರೂ ದಿನವೂ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸೊಸೈಟಿಯ ಕಾರ್ಯದರ್ಶಿ ಅನಿರುದ್ಧ್ ಹಳದಿಪುರಕರ್, ನಿವೃತ್ತ ಪ್ರಚಾರ್ಯ ಆರ್.ಎಸ್.ಹಬ್ಬು, ಹಿಂದೂ ಹೈಸ್ಕೂಲ್ ಮುಖ್ಯ ಶಿಕ್ಷಕ ಅರುಣ ರಾಣೆ, ಬಾಲಮಂದಿರ ಶಾಲೆಯ ಮುಖ್ಯ ಶಿಕ್ಷಕಿ ಅಂಜಲಿ ಮಾನೆ, ಸುಮತಿ ದಾಂಮ್ಲೆ ಬಾಲಕಿಯರ ಶಾಲೆಯ ಮುಖ್ಯ ಶಿಕ್ಷಕಿ ಗಿರಿಜಾ ಬಂಟ ಇದ್ದರು.