ಶಿರಸಿ: ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷವನ್ನ ಸಜ್ಜುಗೊಳಿಸಲು ಕೈ ನಾಯಕರು ಮುಂದಾಗಿದ್ದಾರೆ. ಜ.11ರಿಂದ ರಾಜ್ಯ ಕಾಂಗ್ರೆಸ್ ನಾಯಕರು ಬಸ್ ಯಾತ್ರೆ ಆರಂಭಿಸಿದ್ದು, ಉತ್ತರ ಕನ್ನಡ ಜಿಲ್ಲೆಗೆ ಮಾಜಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಬಸ್ ಯಾತ್ರೆ ಸಂಚರಿಸಲಿದೆ ಎನ್ನಲಾಗಿದೆ.
ವಿಧಾನಸಭಾ ಚುನಾವಣೆಗೆ ಇನ್ನು ಮೂರು ತಿಂಗಳುಗಳು ಮಾತ್ರ ಬಾಕಿ ಉಳಿದಿದೆ. ಈ ಬಾರಿ ಅಧಿಕಾರಕ್ಕೆ ಏರಲೇ ಬೇಕು ಎಂದು ಪ್ರಯತ್ನಕ್ಕೆ ಇಳಿದಿರುವ ವಿರೋಧ ಪಕ್ಷ ಕಾಂಗ್ರೆಸ್ ಈಗಾಗಲೇ ಹಲವು ಕಸರತ್ತನ್ನ ಪ್ರಾರಂಭಿಸಿದ್ದಾರೆ. ಇದರ ಭಾಗವಾಗಿ ಪಕ್ಷ ಸಂಘಟನೆ ಮಾಡಲು ಬಸ್ ಯಾತ್ರೆಯನ್ನ ಹಮ್ಮಿಕೊಂಡಿದ್ದು ಈ ಮೂಲಕ ಸಂಘಟನೆ ಇನ್ನಷ್ಟು ಬಲಪಡಿಸಲು ಕೈ ನಾಯಕರು ಸಿದ್ಧರಾಗಿದ್ದಾರೆ. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕ ಎಂದು ಎರಡು ವಿಭಾಗಗಳನ್ನಾಗಿ ಮಾಡಿಕೊಂಡು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ ಈ ಯಾತ್ರೆಯನ್ನ ಹಮ್ಮಿಕೊಳ್ಳಲಾಗಿದೆ. ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗದಲ್ಲಿ ಯಾತ್ರೆಯನ್ನ ಮುನ್ನಡೆಸಿದರೆ, ಡಿ.ಕೆ ಶಿವಕುಮಾರ್ ದಕ್ಷಿಣ ಕರ್ನಾಟಕದಲ್ಲಿ ಯಾತ್ರೆ ನಡೆಸಲಿದ್ದಾರೆ ಎನ್ನಲಾಗಿದೆ.
ಇನ್ನು ಉತ್ತರ ಕನ್ನಡ ಜಿಲ್ಲೆಯನ್ನ ಕಾಂಗ್ರೆಸ್ ನಾಯಕರು ಉತ್ತರ ಕರ್ನಾಟಕ ಭಾಗದಲ್ಲಿ ಸೇರಿಸಿದ್ದು ಈ ನಿಟ್ಟಿನಲ್ಲಿ ಸಿದ್ದರಾಮಯ್ಯ ಜಿಲ್ಲೆಯಲ್ಲಿ ಬಸ್ ಯಾತ್ರೆಯನ್ನ ನಡೆಸಲಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಈಗಾಗಲೇ ಪಕ್ಷ ಸಂಘಟನೆ ನಿಟ್ಟಿನಲ್ಲಿ ಪ್ರವಾಸಗಳನ್ನ ನಿಗದಿ ಮಾಡಿಕೊಂಡಿದ್ದು ಜನವರಿ 29ರಿಂದ ಬೀದರ್‌ನ ಬಸವಕಲ್ಯಾಣದಲ್ಲಿ ಪೂಜೆಯನ್ನ ನೆರವೇರಿಸಿ ಬಸ್ ಯಾತ್ರೆಗೆ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ. ಇನ್ನು ಫೆಭ್ರವರಿ ತಿಂಗಳಿನಲ್ಲಿ ಸಿದ್ದರಾಮಯ್ಯನವರ ಬಸ್ ಯಾತ್ರೆ ಉತ್ತರ ಕನ್ನಡಕ್ಕೆ ಆಗಮಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಯಲ್ಲಾಪುರ ಭಾಗವಾಗಿ ಉತ್ತರ ಕನ್ನಡ ಜಿಲ್ಲೆಯನ್ನ ಪ್ರವೇಶ ಮಾಡುವ ಯಾತ್ರೆ ಒಂದು ದಿನ ಘಟ್ಟದ ಮೇಲಿನ ಮೂರು ಕ್ಷೇತ್ರ ಹಾಗೂ ಒಂದು ದಿನ ಕರಾವಳಿ ಭಾಗದ ಮೂರು ಕ್ಷೇತ್ರಗಳಲ್ಲಿ ಸಂಚರಿಸಿ ಕಾರ್ಯಕ್ರಮಗಳನ್ನ ಮಾಡಲಿದ್ದಾರೆ ಎನ್ನಲಾಗಿದೆ.
ಸಿದ್ದರಾಮಯ್ಯ ಬಸ್ ಯಾತ್ರೆ ಹಿನ್ನಲೆಯಲ್ಲಿ ಒಂದು ದಿನ ಜಿಲ್ಲೆಯಲ್ಲಿ ವಾಸ್ತವ್ಯವನ್ನ ಸಹ ಹೂಡಲಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ಕಾರವಾರಕ್ಕೆ ರಾತ್ರಿ ಬಸ್ ಯಾತ್ರೆ ಆಗಮಿಸಿ ಸಿದ್ದರಾಮಯ್ಯ ವಾಸ್ತವ್ಯ ಹೂಡಲಿದ್ದು, ಮರು ದಿನ ಕರಾವಳಿ ಭಾಗದಲ್ಲಿ ಬಸ್ ಯಾತ್ರೆ ಸಂಚರಿಸಲಿದ್ದಾರೆ ಎನ್ನಲಾಗಿದ್ದು ಕಾಂಗ್ರೆಸ್ ಪಕ್ಷದ ನಾಯಕರು ಪ್ರವಾಸ ಪಟ್ಟಿಯನ್ನ ಸಿದ್ದಪಡಿಸುತ್ತಿದ್ದಾರೆ ಎನ್ನಲಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸದ್ಯ ಆರು ಕ್ಷೇತ್ರಗಳಲ್ಲಿ ಐದು ಕ್ಷೇತ್ರದಲ್ಲಿ ಬಿಜೆಪಿ ಶಾಸಕರುಗಳೇ ಇದ್ದು, ಸಂಘಟನೆ ಸಹ ಸಾಕಷ್ಟು ಬಲಿಷ್ಠವಾಗಿದೆ. ಇನ್ನು ಕಾಂಗ್ರೆಸ್ ಪಕ್ಷ ಮಾಜಿ ಸಚಿವ ಆರ್ ವಿ ದೇಶಪಾಂಡೆ ನೇತೃತ್ವದಲ್ಲಿ ಸಂಘಟನೆ ಮಾಡುವ ಪ್ರಯತ್ನ ಮಾಡುತ್ತಿದ್ದರು ಬಿಜೆಪಿಗೆ ಪೈಪೋಟಿ ಕೊಡುವಷ್ಟು ಕಾಂಗ್ರೆಸ್ ಪಕ್ಷ ಸಿದ್ದವಾಗಿಲ್ಲ ಎನ್ನುವ ಮಾತು ಪಕ್ಷದ ಕಾರ್ಯಕರ್ತರ ವಲಯದಲ್ಲಿಯೇ ಕೇಳಿ ಬಂದಿದೆ.
ಇದರ ನಡುವೆ ಸಿದ್ದರಾಮಯ್ಯ ಜಿಲ್ಲೆಗೆ ಆಗಮಿಸಿ ಬಸ್ ಯಾತ್ರೆ ನಡೆಸುವುದು ಪಕ್ಷ ಸಂಘಟನೆಗೆ ಆನೆ ಬಲ ಸಿಗಲಿದೆ ಎನ್ನುವ ಮಾತು ಪಕ್ಷದ ಕಾರ್ಯಕರ್ತರಲ್ಲಿ ಕೇಳಿ ಬಂದಿದ್ದು, ಚುನಾವಣೆ ಸಮೀಪಿಸುತ್ತಿರುವ ಸಂಧರ್ಭದಲ್ಲಿ ಕೈ ನಾಯಕರ ಈ ಯಾತ್ರೆ ಎಷ್ಟರ ಮಟ್ಟಿಗೆ ಯಶಸ್ವಿಯಾಗಲಿದೆ ಎನ್ನುವುದನ್ನ ಕಾದುನೋಡಬೇಕಾಗಿದೆ.
ಸ್ಥಳೀಯ ಮಟ್ಟದಲ್ಲೂ ಯಾತ್ರೆ ನಡೆಸಲು ಚರ್ಚೆ ರಾಜ್ಯದ ವಿವಿಧ ಕಡೆ ನಿರಂತರ ಪ್ರವಾಸ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಮುಂದಿನ 100 ದಿನ ಬಿಜೆಪಿ ಸರ್ಕಾರದ ವಿರುದ್ದ ಹೋರಾಟ ನಡೆಸಲು ಕಾಂಗ್ರೆಸ್ ಪಕ್ಷದ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇದರ ಭಾಗವಾಗಿ ಸ್ಥಳೀಯವಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಆಯಾ ಭಾಗದ ಹಿರಿಯ ಮುಖಂಡರು, ಮಾಜಿ ಸಚಿವರು, ಶಾಸಕರು ಪ್ರತ್ಯೇಕವಾಗಿ ಯಾತ್ರೆಯನ್ನ ಮಾಡಲು ಸಹ ಪಕ್ಷದ ನಾಯಕರು ಚರ್ಚಿಸಿದ್ದಾರೆ. ಇಂತಹ ಪ್ರವಾಸಹ ಮೂಲಕ ಮತದಾರರನ್ನ ಸಂಪರ್ಕಿಸಿ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ನಾಯಕರುಗಳು ಮುಂದಾಗಿದ್ದಾರೆ.
ಕಾಂಗ್ರೆಸ್ ಸಂಘಟನೆಗಾಗಿ ರಾಜ್ಯ ಪ್ರವಾಸ: ಜ.11ರಿಂದ ಬಸ್ ಯಾತ್ರೆ
