ನವದೆಹಲಿ: ಪಾಕಿಸ್ತಾನ ಮೂಲದ ಟಿಆರ್‌ಎಫ್ ‘ಉಗ್ರ ಸಂಘಟನೆ’ ಎಂದು ಕೇಂದ್ರ ಸರ್ಕಾರ ಘೋಷಿಸಿದೆ.
ಈ ಸಂಘಟನೆಯ ಕಮಾಂಡರ್ ಶೇಖ್ ಸಜ್ಜದ್ ಗುಲ್‌ನನ್ನು ಉಗ್ರನೆಂದು ಸಹ ಕೇಂದ್ರ ಗೃಹ ಇಲಾಖೆ ಘೋಷಿಸಿದೆ.
ಗೃಹ ವ್ಯವಹಾರಗಳ ಸಚಿವಾಲಯ (MHA) ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ದಾ (Lashkar-e-Taiba) ನಿಷೇಧಿತ ಭಯೋತ್ಪಾದಕ ಸಂಘಟನೆಯ ಶಾಖೆಯಾದ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಮತ್ತು ಅದರ ಅಡಿ ಇರುವ ಇತರೆ ಸಂಘಟನೆಗಳನ್ನು ನಿಷೇಧಿಸಿದೆ. ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ 1967 ರ ಅಡಿಯಲ್ಲಿ ಸಚಿವಾಲಯ ಅವುಗಳನ್ನು ಭಯೋತ್ಪಾದಕ ಸಂಘಟನೆಗಳೆಂದು ಘೋಷಿಸಿದೆ. ಕಾಶ್ಮೀರ ಪಂಡಿತರ ಹತ್ಯೆಗೆ ಟಿಆರ್‌ಎಫ್ ಉಗ್ರ ಸಂಘಟನೆ ಬೆದರಿಕೆ ಒಡ್ಡಿದ್ದನ್ನಿಲ್ಲಿ ಸ್ಮರಿಸಬಹುದಾಗಿದೆ.
“TRFನ ಚಟುವಟಿಕೆಗಳು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಭೌಮತೆಗೆ ಹಾನಿಕಾರಕವಾಗಿದೆ” ಎಂದು ಗೃಹ ವ್ಯವಹಾರಗಳ ಸಚಿವಾಲಯ ಅಧಿಸೂಚನೆಯ ಮೂಲಕ ಘೋಷಿಸಿದೆ. ಅಧಿಸೂಚನೆಯ ಪ್ರಕಾರ, ದಿ ರೆಸಿಸ್ಟೆನ್ಸ್ ಫ್ರಂಟ್ (ಟಿಆಎಫ್) ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚಿಸಲು, ಭಯೋತ್ಪಾದಕರ ನೇಮಕಾತಿ, ಭಯೋತ್ಪಾದಕರ ಒಳನುಸುಳುವಿಕೆ ಮತ್ತು ಪಾಕಿಸ್ತಾನದಿಂದ ಜಮ್ಮು ಮತ್ತು ಕಾಶ್ಮೀರಕ್ಕೆ ಶಸ್ತ್ರಾಸ್ತ್ರಗಳ ಪೂರೈಕೆ ಮತ್ತು ಮಾದಕವಸ್ತುಗಳ ಕಳ್ಳಸಾಗಣೆಗಾಗಿ ಆನ್‌ಲೈನ್ ಮಾಧ್ಯಮದ ಮೂಲಕ ಯುವಕರನ್ನು ನೇಮಿಸಿಕೊಳ್ಳುತ್ತಿರುವುದನ್ನು ಸಹ ಗೃಹ ಸಚಿವಾಲಯ ಉಲ್ಲೇಖಿಸಿದೆ.