ಭಟ್ಕಳ: ಇಲ್ಲಿನ ಮುಸ್ಲಿಮರಲ್ಲಿನ ಪರಸ್ಪರ ಒಗ್ಗಟ್ಟು ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಮುಸ್ಲಿಮರಿಗೆ ಇದು ಅಲ್ಲಾಹ್‌ನಿಂದ ದೊರೆತ ಕೊಡುಗೆಯಾಗಿದೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿ ಪ್ರಧಾನ ಕಾರ್ಯದರ್ಶಿ ಮೌಲಾನ ಖಾಲಿದ್ ಸೈಫುಲ್ಲಾಹ್ ರಹ್ಮಾನಿ ಹೇಳಿದರು.
ಅವರು ಜಮಾಅತುಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭದಲ್ಲಿ ಮಾತನಾಡಿ, ಒಂದು ಮಾದರಿ ಮುಸ್ಲಿಮ್ ಗ್ರಾಮ ಹೇಗಿರಬೇಕು ಎಂಬುದನ್ನು ಭಟ್ಕಳವನ್ನು ನೋಡಿ ಕಲಿಯಬೇಕಾಗಿದೆ. ಇದನ್ನು ಉಳಿಸಿ, ಬೆಳೆಸಿಕೊಂಡು ಹೋಗುವುದು ಇಲ್ಲಿನ ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದರು. 1 ಸಾವಿರ ವರ್ಷ ಇತಿಹಾಸವಿರುವ ಇಲ್ಲಿನ ಜಮಾಅತ್ ಖಝಾಅತ್ (ಇಸ್ಲಾಮಿ ನ್ಯಾಯಾಧೀಶ) ವ್ಯವಸ್ಥೆ ಮತ್ತು ಇಲ್ಲಿನ ಧಾರ್ಮಿಕ ಶಿಕ್ಷಣ ಸಂಸ್ಥೆಗಳು ನಿಜಕ್ಕೂ ಮಾದರಿಯಾಗಿವೆ. ಮದೀನಾದಲ್ಲಿ ಪ್ರಥಮ ಇಸ್ಲಾಮಿ ಷರಿಯತ್ ಕಾನೂನು ನ್ಯಾಯಾಧೀಶರ ನೇಮಕ ಮಾಡಲಾಗಿತ್ತು. ನಂತರ ಯಮನ್ ದೇಶದಲ್ಲಿ ಅದನ್ನು ಜಾರಿಗೆ ತರಲಾಯಿತು. ಭಟ್ಕಳದ ನವಾಯತ್ ಸಮುದಾಯದವರು ಕೂಡ ಯಮನ್ ಮೂಲದವರಾಗಿದ್ದಾರೆ. ದೇಶದಲ್ಲಿ ಮುಸ್ಲಿಮ್ ವೈಯಕ್ತಿಕ ಕಾನೂನಿನ ಮೇಲೆ ನಡೆಯುತ್ತಿರುವ ಪ್ರಹಾರವು ನಾವು ನಮ್ಮ ಷರಿಯಾ ಕಾನೂನು ಪಾಲಿಸದೇ ಇರುವುದರ ಪರಿಣಾಮವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಮಾಅತಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಅಧ್ಯಕ್ಷ ಮೊಹತೇಶಾಮ್ ಅಬ್ದುಲ್ ರೆಹ್ಮಾನ್, ಸಮುದಾಯವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಇಂದಿನ ಸಮಾರಂಭವು ಯಶಸ್ವಿಯಾಗಿದೆ. ಸಹಸ್ರಮಾನೋತ್ಸವ ಆಚರಿಸುತ್ತಿರುವ ಹಿನ್ನೆಲೆಯೂ ಕೂಡ ಸಮುದಾಯವನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವುದಾಗಿದೆ ಎಂದರು.
ಜಮಾಅತಲ್ ಮುಸ್ಲಿಮೀನ್ ಸಹಸ್ರಮಾನೋತ್ಸವ ಸಮಾರಂಭ ಸಮಿತಿಯ ಸಂಚಾಲಕ ಮೌಲಾನ ಮುಹಮ್ಮದ್ ಇಲ್ಯಾಸ್ ನದ್ವಿ, ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯ ಇತಿಹಾಸವನ್ನು ಮೆಲುಕು ಹಾಕಿದರು. ಭಟ್ಕಳದ ಮುಸ್ಲಿಮ್ ನವಾಯತರು ಒಂದು ಸಾವಿರ ಮಾತ್ರವಲ್ಲ, ಅದಕ್ಕೂ ಹೆಚ್ಚು ವರ್ಷದ ಇತಿಹಾಸವನ್ನು ಹೊಂದಿದ್ದಾರೆ. ಆದರೆ 1 ಸಾವಿರ ವರ್ಷಗಳ ಐತಿಹಾಸಿಕ ಪುರಾವೆ ನಮ್ಮಲ್ಲಿದೆ. ಭಟ್ಕಳದ ಅತ್ಯಂತ ಪ್ರಾಚೀನ ಜಾಮಿಯಾ ಮಸೀದಿ(ಚಿನ್ನದಪಳ್ಳಿ) ಕ್ರಿ.ಶ. 643ರಲ್ಲಿ ನಿರ್ಮಾಣಗೊಂಡಿರುವ ಬಗ್ಗೆ ನಮ್ಮಲ್ಲಿ ದಾಖಲೆಗಳಿವೆ. ಮಸೀದಿ ನಿರ್ಮಾಣವಾದಾಗಿನಿಂದಲೇ ಭಟ್ಕಳ ಜಮಾಅತುಲ್ ಮುಸ್ಲಿಮೀನ್ ಸಂಸ್ಥೆಯೂ ಕೂಡ ಹುಟ್ಟಿಕೊಂಡಿತು ಎಂದು ಐತಿಹಾಸಿಕ ದಾಖಲೆಗಳೊಂದಿಗೆ ಮಾತನಾಡಿದರು.
ಜಾಮಿಯಾ ಮಸೀದಿಯ ಖತೀಬ್ ಮತ್ತು ಇಮಾಮ್ ಮೌಲಾನ ಅಬ್ದುಲ್ ಅಲೀಮ್ ಖತೀಬಿ, ಮುಸ್ಲಿಮ್ ಸಮುದಾಯವನ್ನು ಉಮ್ಮತ್ ಎಂದು ಹೇಳಲಾಗುತ್ತದೆ. ಉಮ್ಮತ್ ಎಂದರೆ ಒಬ್ಬರು ಒನ್ನೊಬ್ಬರೊಂದಿಗೆ ಬೆಸೆದುಕೊಂಡಿರುವುದು. ಐಕ್ಯತೆಯಿಂದ ಇರುವುದು ಎಂದರ್ಥವಾಗಿದೆ. ಇಸ್ಲಾಮಿ ಶಿಕ್ಷಣವನ್ನು ಅವಲೋಕಿಸಿದರೆ ಅಲ್ಲಿ ಏಕವ್ಯಕ್ತಿಗಿಂತ ಸಾಮೂಹಿಕತೆಗೆ ಮಹತ್ವ ನೀಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಇಸ್ಲಾಮ್ ಒಗ್ಗಟ್ಟು ಮತ್ತು ಐಕ್ಯತೆಗೆ ಮಹತ್ವ ನೀಡಿದೆ ಎಂದರು.
ಅಖಿಲಾ ಭಾರತ ಪಯಾಮೆ ಇನ್ಸಾನಿಯತ್(ಮಾನವೀಯತೆ ಸಂದೇಶ ವೇದಿಕೆ) ಪ್ರಧಾನ ಕಾರ್ಯದಶಿ ಮೌಲಾನ ಬಿಲಾಲ್ ಹಸನಿ ನದ್ವಿ, ಜಮಾಅತುಲ್ ಮುಸ್ಲಿಮೀನ್ ಭಟ್ಕಳ ಇದರ ಅಧ್ಯಕ್ಷ ಮುಹಮ್ಮದ್ ಶಫಿ ಶಾಬಂದ್ರಿ ಪಟೇಲ್, ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹುಸೇನ್ ಜುಕಾಕೋ, ಡಾ.ಶಫಿ ಮಲ್ಪಾ ಮಾತನಾಡಿದರು. ಮೌಲಾನ ಅಬ್ದುಲ್ ನೂರ್ ನದ್ವಿ ಕಾರ್ಯಕ್ರಮ ನಿರೂಪಿಸಿದರು.
ಈ ಸಂದರ್ಭದಲ್ಲಿ ಮರ್ಖಝಿ ಜಮಾಅತುಲ್ ಮುಸ್ಲಿಮೀನ್ ಪ್ರಧಾನ ಖಾಝಿ ಮೌಲಾನ ಕ್ವಾಜಾ ಮುಹಿದ್ದೀನ್ ಅಕ್ರಮಿ ಮದನಿ ನದ್ವಿ, ಜಾಮಿಯಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಮೌಲಾ ಅಬ್ದುಲ್ ಅಲೀಮ್ ಖಾಸ್ಮಿ, ರಾಬಿತಾ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅತಿರ‍್ರಹ್ಮಾನ್ ಮುನೀರಿ, ತಂಝೀಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ, ಖಮರ್ ಸಾದಾ ಭಟ್ಕಳ ಮುಸ್ಲಿಮ್ ಯುತ್ ಫೆಡರೇಶನ್ ಅಧ್ಯಕ್ಷ ಮೌಲಾನ ಅಝೀರ‍್ರಹ್ಮಾನ್ ರುಕ್ನುದ್ದೀನ್ ನದ್ವಿ ಸೇರಿದಂತೆ ಸಮುದಾಯದ ಹಲವು ಗಣ್ಯರು ಉಪಸ್ಥಿತರಿದ್ದರು.