ಯಲ್ಲಾಪುರ: ಪಟ್ಟಣದ ಕಾಳಮ್ಮನಗರ ಕಾಳಮ್ಮ ದೇವಿ ದೇವಸ್ಥಾನದ ಸಭಾ ಭವನದಲ್ಲಿ ರವಿವಾರ ಭಂಡಾರಿ ಸಮಾಜದ ಜಿಲ್ಲಾ ಪದಾಧಿಕಾರಿಗಳ ಸಭೆ ನಡೆಯಿತು.
ತಾಲೂಕು ಭಂಡಾರಿ ಸಮಾಜದ ಅಧ್ಯಕ್ಷ ಪ್ರೇಮಾನಂದ ನಾಯ್ಕ ಕಾರ್ಯಕ್ರಮಕ್ಕೆ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿ, ಜಿಲ್ಲೆಯಲ್ಲಿ ಭಂಡಾರಿ ಸಮಾಜದ ಜನ ಸಾಕಷ್ಟು ಪ್ರಮಾಣದಲ್ಲಿ ಇದ್ದರೂ, ಯಾವುದೇ ರಾಜಕೀಯ ಹುದ್ದೆಗಳು ಸಿಗದೇ ಮೂಕ ವೇದನೆಯಿಂದ ಅನುಭವಿಸುತ್ತಿದ್ದಾರೆ. ಭಾರತದ ಸ್ವಾತಂತ್ರ್ಯದ ನಂತರ ನಾಗರಿಕ ಸಮಾಜ ಬಹಳಷ್ಟು ಬದಲಾವಣೆ ಕಂಡಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಪ್ರಾತಿನಿಧ್ಯತ್ವ ಪಡೆಯಲು ನಮ್ಮ ಸಮಾಜ ತೀರ ಹಿಂದಿದ್ದೇವೆ. ಅತಿ ಪುರಾತನ ಸಮಾಜ ನಮ್ಮದಾಗಿದ್ದರು, ಇಂದು ಸಾಮಾಜಿಕ ನ್ಯಾಯ ಪಡೆಯುವಲ್ಲಿ ವಿಫಲರಾಗಿದ್ದೇವೆ. ಈ ಮಧ್ಯ 1978ರಲ್ಲಿ ಕಾರವಾರ ಕ್ಷೇತ್ರದಿಂದ ರಾಜಕೀಯ ನೇತಾರ ದೀಪಕ ವೈಂಗಣಕರ್ ಅವರ ತಂದೆ ದಿ.ದತ್ತಾತ್ರೇಯ ವೈಂಗಣಕರ್ ಶಾಸಕರಾಗಿ ಪ್ರತಿನಿಧಿಸಿದ್ದನ್ನು ಹೊರತುಪಡಿಸಿದರೆ ನಂತರ ನಮ್ಮ ಸಮಾಜಕ್ಕೆ ಯಾವುದೇ ಅವಕಾಶವು ಸಿಗಲಿಲ್ಲ ಹಾಗೂ ಪ್ರಯತ್ನಗಳು ಕೂಡ ನಡೆಯದೇ ಇರುವುದು ವಿಷಾದನೀಯ ಸಂಗತಿಯಾಗಿದೆ ಎಂದರು.
ಇತ್ತೀಚೆಗೆ ಭಂಡಾರಿ ಅಥವಾ ದೇಶ ಭಂಡಾರಿ ಸಮಾಜದ ಸಂಘಟನೆ ಕ್ರಿಯಾಶೀಲವಾಗುತ್ತಿರುವುದು ಸಂತಸದ ಸಂಗತಿಯಾಗಿದೆ. ನಮ್ಮ ಸಮಾಜದ ಯೋಧ ಸಹಕಾರಿ ಸಂಘ ನಮ್ಮ ಹೆಮ್ಮೆಯ ಸಂಕೇತವಾಗಿದೆ ಇನ್ನೂ ಅನೇಕ ಧಾರ್ಮಿಕ, ಆಧ್ಯಾತ್ಮಿಕ, ನಮ್ಮ ಭಾಷೆಯ ಬಗ್ಗೆ ನಮಗಿರುವ ಅಭಿಮಾನ ಬೇರೆ ಯಾವ ಸಮಾಜದವರಲ್ಲಿ ಕಂಡು ಬರುವುದಿಲ್ಲ. ಹೀಗೆ ನಾವು ಅನೇಕ ಕ್ಷೇತ್ರದಲ್ಲಿ ಪ್ರಿಯಾಶೀಲರಾಗಿದ್ದರೂ, ಸಮಾಜದಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದ ಅನೇಕ ವೈದ್ಯರು, ನ್ಯಾಯಾಧೀಶರು, ವಕೀಲರು, ಹೊರದೇಶದಲ್ಲಿ ಇರುವ ಯುವಕರು ಉತ್ತಮ ಉದ್ಯೋಗವನ್ನು ಹೊಂದಿ ಸದೃಢ ಆರ್ಥಿಕ ಸ್ಥಿತಿಯನ್ನು ಹೊಂದಿದ್ದಾರೆ. ಸಂಘಟನೆಯ ಮೂಲಕ ಸರ್ಕಾರದ ಕಡೆ ಅಥವಾ ರಾಷ್ಟ್ರೀಯ ಸಂಘಟನೆಯ ಪಕ್ಷಗಳ ಅವರ ಗಮನ ಸೆಳೆಯುವ ಕಾರ್ಯ ಆಗುತ್ತಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ನಾವು ರಾಜಕೀಯ ಪ್ರಾತಿನಿಧ್ಯ ಪಡೆಯುವ ಕಾರ್ಯ ಆಗಬೇಕು ಎಲ್ಲಾ ಕ್ಷೇತ್ರಗಳಲ್ಲಿ ನಮ್ಮ ಧ್ವನಿ ಇರಬೇಕು ಆಗ ಮಾತ್ರ ನಮ್ಮ ಸಂಘಟನೆ ಬಲಗೊಳ್ಳಲು ಸಾಧ್ಯ ಎಂದು ಹೇಳಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಭಂಡಾರಿ ಸಮಾಜದ ಅಧ್ಯಕ್ಷ ಕೇಶವ ಪೆಡ್ನೇಕರ ಮಾತನಾಡಿ, ನೂರು ವರ್ಷದ ಇತಿಹಾಸವುಳ್ಳ ಕಾರವಾರ ಜಿಲ್ಲಾ ಭಂಡಾರಿ ಸಮಾಜ ಸಂಘಟನೆ, ಇತ್ತೀಚಿನ ದಿನಗಳಲ್ಲಿ ಕೇವಲ ಸಂಘಟನೆಯಾಗಿ ಇದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಬಂಡಾರಿ ಸಮಾಜದವರು ಹೆಚ್ಚಿನ ಸಂಖ್ಯೆಯಲ್ಲಿದ್ದರು, ಸಂಘಟನೆಯನ್ನು ಗಟ್ಟಿಗೊಳಿಸಲು ಲಕ್ಷ ವಹಿಸಿದೇ ಇರುವುದು ದುಃಖದ ಸಂಗತಿಯಾಗಿದೆ ಎಂದರು.
ನಮ್ಮ ಸಮಾಜದಲ್ಲಿ ಸಾಕಷ್ಟು ಜನ ವಿದ್ಯಾವಂತರು ಆರ್ಥಿಕವಾಗಿ ಸಂಪನ್ನರು ಇದ್ದಾರೆ. ಎಲ್ಲರೂ ಮುಂಬೈ, ಗೋವಾ, ಚೆನೈ ಹಾಗೂ ವಿದೇಶಗಳಲ್ಲಿ ನೆಲೆಸಿದ್ದಾರೆ. ಅವರಿಗೆ ಸಮಾಜದ ಬಗ್ಗೆ ಆಸಕ್ತಿ ಇಲ್ಲದಿರುವುದು ನಮ್ಮ ಸಮಾಜದ ವೈಫಲ್ಯ ಎಂದು ಭಾವಿಸಬಹುದು. ಆದರೆ ಸಮಾಜದವರಿಗೆ ರಾಜಕೀಯ ಪ್ರಾತಿನಿತ್ಯ ಸಿಗದೇ ಇದ್ದಲ್ಲಿ ನಮ್ಮಲ್ಲಿ ಹೋರಾಟದ ಅಭಿಮಾನ ಯುವಕರು ಚಾರಿತ್ರ್ಯವಂತರಾಗಿ ಒಳ್ಳೆಯ ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜ ಸಂಘಟಿಸಲು ಮುಂದಾಗಬೇಕು. ನಮ್ಮ ಧ್ವನಿ ವಿಧಾನಸೌಧದ ಒಳಗೆ ಪ್ರತಿದ್ವನಿಸಬೇಕು. ಸಮಾಜದ ಸಂಘಟನೆಯಲ್ಲಿ ಹೊಸ ಯುವ ಮುಖಗಳು ಬರಲಿ, ಯಲ್ಲಾಪುರದ ನಮ್ಮ ಸಮಾಜದ ಅಧ್ಯಕ್ಷ ಪ್ರೇಮಾನಂದ ನಾಯ್ಕ ಮಾದರಿಯಲ್ಲಿ ಎಲ್ಲಾ ತಾಲೂಕಿನ ಅಧ್ಯಕ್ಷರುಗಳು ಕೆಲಸ ಮಾಡಬೇಕು ಎಂದು ಆಶಿಸಿದರು.
ಪ್ರಮುಖರಾದ ಸದಾನಂದ ಭಂಡಾರಿ, ಅರವಿಂದ ಕಲಗುಟ್ಕರ್, ನಾಗೇಂದ್ರ ಪತ್ರೇಕರ, ಜಿ.ಎಸ್.ಪತ್ರೇಕರ, ಸಿ.ಪಿ.ನಾಯ್ಕ ಶಿರಸಿ, ಮಹಿಳಾ ಜಿಲ್ಲಾ ಅಧ್ಯಕ್ಷರಾದ ಯೋಗಿನಿ ಭಂಡಾರಿ, ಛಾಯಾ ಜಾವ್ಕರ್, ಚಂದ್ರಕಾಂತ ಭಂಡಾರಿ, ಸಂಜಯ್ ಕಾಂಬಳೆ, ಸದಾನಂದ ನಾಯ್ಕ ಗೋಕರ್ಣ, ಅರುಣ ಮಣಕಿಕರ್, ಸದಾನಂದ ಮಾಂಜ್ರೇಕರ್, ಮೋಹನ್ ಕಿಂದಳಕರ್, ನಾಗರಾಜ ನಾಯ್ಕ, ವಕೀಲರಾದ ವಿಠ್ಠಲ್ ಬಂಡಾರಿ, ಶಾಂತರಾಮ ತಾಮ್ಸೆ ಮುಂತಾದವರು ಸಭೆಯಲ್ಲಿ ಇದ್ದರು.
ಭಂಡಾರಿ ಸಮಾಜ ಅಭಿವೃದ್ಧಿಗೆ ರಾಜಕೀಯ ಪ್ರಾತಿನಿಧಿತ್ವ ಅವಶ್ಯ: ಪ್ರೇಮಾನಂದ ನಾಯ್ಕ
