Slide
Slide
Slide
previous arrow
next arrow

ಹಿರಿಯ ಪತ್ರಕರ್ತ ರವೀಂದ್ರ ಭಟ್ಟರಿಗೆ ‘ಕಾರ್ಯದಕ್ಷ’ ಪ್ರಶಸ್ತಿ ಪ್ರಕಟ

300x250 AD

ಶಿರಸಿ: ಹೆಸರಾಂತ ಪತ್ರಕರ್ತ, ಪ್ರಜಾವಾಣಿ ದೈನಿಕದ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ಟ ಅವರಿಗೆ ದೇಶದ ಏಕಮೇವ ತಾಲೂಕಿನ ಕಲಗದ್ದೆಯ ಯಕ್ಷಗಾನ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಿಂದ ನೀಡಲಾಗುವ ರಾಜ್ಯ ಮಟ್ಟದ ಕಾರ್ಯದಕ್ಷ ಪ್ರಶಸ್ತಿ ಪ್ರಕಟಿಸಲಾಗಿದೆ.

ದೇವಸ್ಥಾನದ ಪ್ರಧಾನ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಈ ವಿಷಯ‌ ಪ್ರಕಟಿಸಿ, ಜನವರಿ 10ರಂದು ಸಂಜೆ 4ಕ್ಕೆ ದೇವಾಲಯದ ವಾರ್ಷಿಕೋತ್ಸವ ಸಂದರ್ಭದಲ್ಲಿ ಪ್ರಶಸ್ತಿಯನ್ನು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಪ್ರದಾನ ಮಾಡಲಿದ್ದಾರೆ.

ಮೂಲತಃ ಜಿಲ್ಲೆಯ ಸಿದ್ದಾಪುರ ತಾಲೂಕಿನ ಐನಕೈನ ಸುಸಂಸ್ಕೃತ ಮನೆತನದ ರವೀಂದ್ರ ಭಟ್ಟ, ತಮ್ಮ ಮೇಧಾಶಕ್ತಿಯಿಂದ ಪತ್ರಿಕೋದ್ಯಮದಲ್ಲಿ ಅನವರತ ಸಾಧನೆ ಮಾಡಿ ಪ್ರಸ್ತುತ ಪ್ರಜಾವಾಣಿಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ. ರಾಷ್ಟ್ರ ಮಟ್ಟದ ಆರ್ಥಿಕ, ರಾಜಕೀಯ ವಿಶ್ಲೇಷಕರಾಗಿ, ಸಾಂಸ್ಕೃತಿಕ ಚಿಂತಕರಾಗಿ ಗುರುತಾಗಿದ್ದಾರೆ. ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡುವದು ಖುಷಿ ತಂದಿದೆ ಎಂದು ವಿನಾಯಕ ಹೆಗಡೆ ತಿಳಿಸಿದ್ದಾರೆ.

ಶಿರಸಿಯ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ, ಧಾರವಾಡದಲ್ಲಿ ಎಂ.ಎ. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ಶಿಕ್ಷಣ‌ ಪಡೆದ ರವೀಂದ್ರ ಭಟ್ಟ ಅವರು, 1990ರಲ್ಲಿ ಸಂಯುಕ್ತ ಕರ್ನಾಟಕದಿಂದ ವೃತ್ತಿ ಆರಂಭಿಸಿ, ಕನ್ನಡಮ್ಮ, ಅಭಿಮಾನಿ, ಅರಗಿಣಿ, ಈ ಸಂಜೆ, ಉದಯವಾಣಿಗಳಲ್ಲಿ ಸೇವೆ ಸಲ್ಲಿಸಿದ್ದಾರೆ. 1995ರಿಂದ ಪ್ರಜಾವಾಣಿಯಲ್ಲಿ ಸೇವೆ ಆರಂಭಿಸಿ ಪ್ರಸ್ತುತ ಕಾರ್ಯನಿರ್ವಾಹಕ ಸಂಪಾದಕರಾಗಿ ಕಾರ್ಯ ಮಾಡುತ್ತಿದ್ದಾರೆ.

300x250 AD

ಇವರೇ ಬರಮಾಡಿಕೊಂಡ ಬರ, ಆದಿವಾಸಿ ನಾಯಕಿ ಜಾಜಿ ತಿಮ್ಮಯ್ಯ ಅವರ ಜೀವನ ಚರಿತ್ರೆ ಹೆಜ್ಜೇನು, ಬದುಕು ಮರದ ಮೇಲೆ, ಮೂರನೇ ಕಿವಿ, ಸಂಪನ್ನರು, ಅಕ್ಷಯ ನೇತ್ರ, ಮೈಸೂರೆಂಬ ಬೆರಗು, ಸಹಸ್ರಪದಿ, ಇಂಥವರೂ ಇದ್ದಾರೆ ಜಗದೊಳಗೆ, ಜನಕಂಜಿ ನಡೆಯದವರ ಸಂತೆ, ರಾಜಕಾರಣದಲ್ಲಿ ನಿಂಬೆ, ಹಾಗಲ ಸೇರಿದಂತೆ ಅನೇಕ ಕೃತಿಗಳನ್ನೂ ಬರೆದಿದ್ದಾರೆ.

ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ನೀಡುವ ಮಹಾತ್ಮಾಗಾಂಧಿ ಪ್ರಶಸ್ತಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ನೀಡುವ ನಾರಾಯಣಸ್ವಾಮಿ ಪ್ರಶಸ್ತಿ, ಮುರುಘಾಶ್ರೀ ಪ್ರಶಸ್ತಿ, ಬೆಂಗಳೂರಿನ ಸಿಡಿಎಲ್ ಸಂಸ್ಥೆ ನೀಡುವ ಚರಕ ಪ್ರಶಸ್ತಿ, ಎಚ್.ಎಸ್.ಕೆ. ಪ್ರತಿಷ್ಠಾನದ ಎಚ್.ಎಸ್.ಕೆ. ಪ್ರಶಸ್ತಿ, ರೋಟರಿ ಸಿಲಿಕಾನ್ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರು ಮಹಾನಗರ ಪಾಲಿಕೆ ನೀಡುವ ಕೆಂಪೇಗೌಡ ಪ್ರಶಸ್ತಿ, ಡಾ.ಶಾಂತಾರಾಧಾಕೃಷ್ಣ ಎಂಡೋಮೆಂಟ್ ಪ್ರಶಸ್ತಿ, ಕರ್ನಾಟಕ ಅಕ್ಷರ ಪ್ರಶಸ್ತಿ, ಎಚ್.ಕೆ.ವೀರಣ್ಣ ಗೌಡ ಪತ್ರಿಕೋದ್ಯಮ ಪ್ರಶಸ್ತಿ, ಬೆಂಗಳೂರು ಪ್ರೆಸ್ ಕ್ಲಬ್ ವಾರ್ಷಿಕ ಪ್ರಶಸ್ತಿ, ಪಾ.ವೆಂ.ಆಚಾರ್ಯ ಮಾಧ್ಯಮ ಪ್ರಶಸ್ತಿ, ಅಂಕಣ ಬರಹಗಳಿಗೆ ಮಾಸ್ತಿ ಪ್ರಶಸ್ತಿಗಳು ಬಂದಿವೆ.

ಕಳೆದ ವರ್ಷ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ದೇವಾಲಯದಿಂದ ರಾಜಮಾನ್ಯ ಪ್ರಶಸ್ತಿ ‌ನೀಡಿ ಗೌರವಿಸಲಾಗಿತ್ತು. ಈ ಬಾರಿ ರವೀಂದ್ರ ಭಟ್ಟ ಅವರಿಗೆ ಅರಸಿ ಬಂದಿದೆ ಎಂಬುದು ಉಲ್ಲೇಖನೀಯ.

Share This
300x250 AD
300x250 AD
300x250 AD
Back to top