ಶಿರಸಿ: ಹಳಿಯಾಳದಲ್ಲಿ ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ಅಂತರ್ ಕಾಲೇಜುಗಳ ವಲಯ ಮಟ್ಟದ ಯುವಜನೋತ್ಸವದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು 20 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 16 ಬಹುಮಾನಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿ ಹೆಚ್ಚಿಸಿ, ರನ್ನರ್ ಅಪ್ ಆಗಿ ಆಯ್ಕೆಯಾಗಿದ್ದಾರೆ.
ಏಕಾಂಕ ನಾಟಕ, ಪ್ರಹಸನ, ಜನಪದ ವಾದ್ಯ, ಕನ್ನಡ ಭಾಷಣ, ಪೋಸ್ಟರ್ ಮೇಕಿಂಗ್‌ನಲ್ಲಿ ಪ್ರಥಮ ಸ್ಥಾನ, ಭಾರತೀಯ ಸಮೂಹ ಗಾಯನ, ಮೂಕಾಭಿನಯ, ಜಾನಪದ ನೃತ್ಯ, ಶಾಸ್ತ್ರೀಯ ನೃತ್ಯ, ಕ್ಲೆ ಮಾಡ್ಲಿಂಗ್, ಕೋಲ್ಯಾಜ್, ಚರ್ಚಾಸ್ಪರ್ಧೆ, ಮಿಮಿಕ್ರಿಯಲ್ಲಿ ದ್ವಿತೀಯಸ್ಥಾನ, ಮತ್ತು ವ್ಯಂಗ್ಯಚಿತ್ರ, ಮೆಹಂದಿ, ಇನ್ಸ್ಟಾಲೇಷನ್’ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿಜೇತರು ಕರ್ನಾಟಕ ವಿಶ್ವವಿದ್ಯಾಲಯಗಳ ಕಾಲೇಜು ಮಟ್ಟದ ಯುವಜನೋತ್ಸವದಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಇಷ್ಟೊಂದು ಬಹುಮಾನಗಳು ಕಾಲೇಜಿಗೆ ಬಂದಿರುವುದು ಕಾಲೇಜಿನ ಇತಿಹಾಸದಲ್ಲಿ ಮೊದಲು ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ.
ವಿಜೇತ ಎಲ್ಲ ವಿದ್ಯಾರ್ಥಿಗಳಿಗೆ ವಿಧಾನಸಭಾಧ್ಯಕ್ಷರೂ, ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಪ್ರಾಂಶುಪಾಲರಾದ ಡಾ.ದಾಕ್ಷಾಯಣಿ ಜಿ. ಹೆಗಡೆ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಡಾ.ಸತೀಶ ಎನ್.ನಾಯ್ಕ, ಡಾ.ವಸಂತ ಎಸ್.ನಾಯ್ಕ, ಡಾ.ಮಹಾಲಕ್ಷ್ಮಿ ನಾಯ್ಕ, ಮಮತಾ ನಾಯ್ಕ ಸೇರಿದಂತೆ ಕಾಲೇಜಿನ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಮಾನಸ ಹೆಗಡೆ ರಚನೆಯ ಮರಳಿ ಗೂಡಿಗೆ ಏಕಾಂಕ ನಾಟಕ ಹಾಗೂ ಕೇಶವ ನಾಯ್ಕ, ಹುಸರಿ ರಚನೆಯ ಪ್ರಹಸನವನ್ನು ಕಿರುತರೆ ಖ್ಯಾತಿಯ ನೀನಾಸಂ ನಾಗರಾಜ ಬರೂರು ಅವರು ನಿರ್ದೇಶನ ಮಾಡಿದ್ದರು. ಜನಪದ ನೃತ್ಯ ಮೂಕಾಭಿನಯಕ್ಕೆ ನಾಗರಾಜ ನಾಯ್ಕ ತರಬೇತಿ ನೀಡಿದರೆ, ಜಾನಪದ ವಾದ್ಯಕ್ಕೆ ನರೇಂದ್ರ ನಾಯ್ಕ ತರಬೇತಿ ನೀಡಿದ್ದರು. ಇವರೆಲ್ಲರಿಗೂ ಪ್ರಾಂಶುಪಾಲರು ಧನ್ಯವಾದ ಸಲ್ಲಿಸಿದ್ದಾರೆ.