ಶಿರಸಿ; ತಾಲೂಕಿನ ಹುಲೆಕಲ್ ಗ್ರಾಮದ ಶ್ರೀಮಾರುತಿ ದೇವಸ್ಥಾನದ ವಾರ್ಷಿಕೋತ್ಸವ ಅತ್ಯಂತ ಸಂಭ್ರಮ ಸಡಗರದಿಂದ ಜರುಗಿತು. ಭಕ್ತರ ದೇಣಿಗೆಯಿಂದ ನೂತನವಾಗಿ ಮಾರುತಿ ದೇವರಿಗೆ ಬೆಳ್ಳಿ ಕವಚ ಹಾಗೂ ಪ್ರಭಾವಳಿಯನ್ನು ಸಮರ್ಪಿಸಲಾಯಿತು.
ದೇವರ ಬೆಳ್ಳಿ ಕವಚ ಹಾಗೂ ಪ್ರಭಾವಳಿಯನ್ನು ವಾಹನದಲ್ಲಿ ವಿಶೇಷ ಅಲಂಕಾರದೊoದಿಗೆ ಗ್ರಾಮದ ಮಹಾದ್ವಾರದಿಂದ ಹೊರಟು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ರಸ್ತೆಯ ಮಾರ್ಗವಾಗಿ ಸಂಚರಿಸಿ, ಮೆರವಣಿಗೆಯಲ್ಲಿ ಡೊಳ್ಳು ಪಂಚವಾದ್ಯದೊoದಿಗೆ ದೇವಾಲಯಕ್ಕೆ ಆಗಮಿಸಿತು.
ನಂತರ ಪಂಚಗವ್ಯಹವನ, ಫಲ ಪಂಚಾಮೃತ ಕಲಶಾಭಿಷೇಕ, ರುದ್ರಾಭಿಷೇಕ ಕಾರ್ಯಕ್ರಮಗಳು ದೇವಾಲಯದ ಪ್ರಧಾನ ಅರ್ಚಕ ವೇದಮೂರ್ತಿ ಗಣಪತಿ ಜೋಶಿ ಅವರ ನೇತೃತ್ವದಲ್ಲಿ ನಡೆಯಿತು. ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಿತು. ಸಾಯಂಕಾಲ ಪಲ್ಲಕ್ಕಿ ಉತ್ಸವ, ದೀಪೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಬೆಳ್ಳಿ ಕವಚ ತಯಾರಿಸಿದ ಸಿದ್ದಾಪುರದ ಸುವರ್ಣ ಮತ್ತು ರಜತ ಶಿಲ್ಪಿ ಪ್ರಶಾಂತ ಶೇಟ್ ದಂಪತಿಯನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ದೇವಾಲಯದ ಆಡಳಿತ ಮಂಡಳಿಯವರೆಲ್ಲರ ಪರವಾಗಿ ಮಾರುತಿ ದೇವಾಲಯದ ಅಧ್ಯಕ್ಷ ವಿನಯ್ ಡಿ.ಗೌಡರ್ ಮಾತನಾಡಿ, ಬಹುದಿನಗಳಿಂದ ಮಾರುತಿ ದೇವರಿಗೆ ಬೆಳ್ಳಿಯ ಕವಚ ಪ್ರಭಾವಳಿ ತಯಾರಿಸಬೇಕೆಂದು ಕಮಿಟಿಯಿಂದ ನಿರ್ಧರಿಸಿದ್ದು, ಎಲ್ಲಾ ಭಕ್ತರ ಸಂಕಲ್ಪ ಆಗಿತ್ತು. ಈ ವರ್ಷ ಸಂಕಲ್ಪ ಈಡೇರಿದೆ. ದೇವರ ಬೆಳ್ಳಿಯ ಕವಚ ಹಾಗೂ ಪ್ರಭಾವಳಿಗಳು ಅತ್ಯಂತ ಕುಸರಿ ಕೆಲಸದಿಂದ ನಿರ್ಮಾಣಗೊಂಡಿದ್ದು, ಎಲ್ಲಾ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ನಂತರ ಹರಾಜು ಕಾರ್ಯಕ್ರಮವನ್ನು ಶಿಕ್ಷಕ ಜಿ.ಕೆ.ಭಟ್ ನಿರ್ವಹಿಸಿ ಆಭಾರ ಮನ್ನಿಸಿದರು. ವಿಶೇಷವಾಗಿ ಯಕ್ಷಗಾನ ಮತ್ತು ಜಾನಪದ ಕಲಾ ಸಂಘ ಕೊಳಿಗಾರ್ ಇವರಿಂದ ವೀರಮಣಿ ಕಾಳಗ, ಯಕ್ಷಗಾನ ಪ್ರದರ್ಶನ ಅತ್ಯಂತ ಆಕರ್ಷಣೀಯವಾಗಿತ್ತು.