ನವದೆಹಲಿ: ಭೀಕರ ರಸ್ತೆ ಅಪಘಾತದಲ್ಲಿ ಖ್ಯಾತ ಕ್ರಿಕೆಟರ್, ವಿಕೆಟ್ ಕೀಪರ್ ರಿಷಭ್ ಪಂತ್ ಗಾಯಗೊಂಡಿದ್ದಾರೆ. ಅವರು ಶುಕ್ರವಾರ ಬೆಳಗ್ಗೆ ಉತ್ತರಾಖಂಡ್‌ನಿಂದ ದೆಹಲಿಗೆ ವಾಪಸ್ ಆಗುತ್ತಿದ್ದ ಸಂದರ್ಭದಲ್ಲಿ ಹಮ್ಮದ್‌ಪುರ ಝಾಲ್ ಬಳಿ ರೂರ್ಕಿಯ ನರ್ಸನ್ ಗಡಿಯಲ್ಲಿರುವ ದೆಹಲಿ-ಡೆಹ್ರಾಡೂನ್ ಹೆದ್ದಾರಿಯ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ನಡೆದಿದ್ದು, ರಿಷಭ್ ಪಂತ್‌ರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವೈದ್ಯರ ಪ್ರಕಾರ, ರಿಷಬ್ ಪಂತ್ ಅವರ ಹಣೆ ಮತ್ತು ಕಾಲಿಗೆ ಗಾಯಗಳಾಗಿವೆ. ಸದ್ಯ ರಿಷಬ್ ಪಂತ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದ್ದು, ಅವರನ್ನು ರೂರ್ಕಿಯಿಂದ ದೆಹಲಿಗೆ ಕಳುಹಿಸಲಾಗುತ್ತಿದೆ ಎಂದು ಸಕ್ಷಮ್ ಆಸ್ಪತ್ರೆಯ ಅಧ್ಯಕ್ಷ ಡಾ. ಸುಶೀಲ್ ನಗರ್ ತಿಳಿಸಿದ್ದಾರೆ. ಹಾಗೇ, ರಿಷಬ್ ದಾಖಲಾಗಿದ್ದ ಸಕ್ಷಮ್ ಆಸ್ಪತ್ರೆಗೆ ದೇಹತ್ ಪೊಲೀಸ್ ಅಧಿಕಾರಿ ಸ್ವಪ್ಪಾ ಕಿಶೋರ್ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ.
ಕಾರಿನಲ್ಲಿ ಯಾರೆಲ್ಲ ಇದ್ದರು ಎಂಬ ಬಗ್ಗೆ ಇನ್ನೂ ನಿಖರ ಮಾಹಿತಿ ಸಿಕ್ಕಿಲ್ಲ. ಡಿವೈಡರ್‌ಗೆ ಡಿಕ್ಕಿಯಾದ ರಿಷಭ್ ಪಂತ್ ಅವರ ಮರ್ಸಿಡಿಸ್ ಕಾರು ಒಮ್ಮೆಲೇ ಬೆಂಕಿಹೊತ್ತಿಕೊಂಡು ಉರಿಯಿತು. ಬಳಿಕ ತುಂಬ ಕಷ್ಟಪಟ್ಟು ಆ ಬೆಂಕಿ ಆರಿಸಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.